

ಬೆಂಗಳೂರು: ಯಾವುದೇ ರಾಸಾಯನಿಕಗಳನ್ನು ಬಳಸದ, ನೈಸರ್ಗಿಕವಾಗಿ ಮಾಗಿದ ಸಾವಯವ ಮಾವಿನ ರುಚಿಯನ್ನು ಗ್ರಾಹಕರು ಸವಿಯುವಂತೆ ಮಾಡಲು ಶುಕ್ರವಾರದಿಂದ ಭಾನುವಾರವರೆಗೆ (ಮೇ 23- 25) ಮೂರು ದಿನಗಳ ಕಾಲ ಲಾಲ್ಬಾಗ್ನಲ್ಲಿ ‘ಮಾವು ಮತ್ತು ಹಲಸಿನ ಹಬ್ಬ’ ಹಮ್ಮಿಕೊಳ್ಳಲಾಗಿದೆ.
ಸಾವಯವ ಮಾವು ಮತ್ತು ಹಲಸಿನ ಹಣ್ಣು, ಅಡುಗೆ ಮತ್ತು ಮೌಲ್ಯವರ್ಧಿತ ಪದಾರ್ಥಗಳನ್ನು ಗ್ರಾಹಕರಿಗೆ ಪರಿಚಯಿಸಲು ಜೈವಿಕ್ ಕೃಷಿಕ್ ಸೊಸೈಟಿ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಮೇಳವನ್ನು ಲಾಲ್ಬಾಗ್ನ ಡಾ.ಎಂ.ಎಚ್. ಮರೀಗೌಡ ಸಭಾಂಗಣದಲ್ಲಿ ಏರ್ಪಡಿಸಲಾಗುವುದು. 23ರ ಮಧ್ಯಾಹ್ನ 3 ಗಂಟೆಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 24 ಮತ್ತು 25 ರಂದು ಬೆಳಗ್ಗೆ 7ರಿಂದ ಸಂಜೆ 6 ರವರೆಗೆ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ತೋಟಗಾರಿಕಾ ತಜ್ಞರಾದ ಡಾ.ರಾಮಕೃಷ್ಣಪ್ಪ ಮತ್ತು ಡಾ.ಹಿತ್ತಲಮನಿ ಅವರು 24ರಂದು 11 ಗಂಟೆಗೆ ಸಾವಯವ ಮಾವು ಮತ್ತು ಹಲಸಿನ ಕೃಷಿಯ ಬಗ್ಗೆ ಆಸಕ್ತ ರೈತರಿಗೆ ಅಗತ್ಯ ಮಾಹಿತಿ ನೀಡಲಿದ್ದಾರೆ. ಕೃಷಿ ಪಂಡಿತ ಶಿವನಾಪುರ ರಮೇಶ್ ಹಲಸಿನ ತೋಟ ಕಟ್ಟುವ ಬಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ವಿವರಿಸಿದರು. ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಪರಮಶಿವಯ್ಯ, ಜೈವಿಕ್ ಕೃಷಿಕ್ ಜಂಟಿ ನಿರ್ದೇಶಕಿ ಹೇಮಾ ಮತ್ತಿತರರಿದ್ದರು.