ಶಿಕ್ಷಕರ ವರ್ಗಾವಣೆಗೆ ಸುಗ್ರೀವಾಜ್ಞೆ ತರಲು ಮುಂದಾದ ಶಿಕ್ಷಣ ಇಲಾಖೆ

teacherssss
Published on

ಬೆಂಗಳೂರು: ನನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಬಗ್ಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದೆ.

ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಾಯ್ದೆಗೆ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡುವ ಸಾಧ್ಯತೆ ಹೆಚ್ಚಿದೆ. ಇದರಿಂದ ವರ್ಗಾವಣೆಗಾಗಿ ಚಾತಕಪಕ್ಷಿಗಳಂತೆ ಎದುರು ನೋಡುತ್ತಿರುವ ಸಾವಿರಾರು ಶಿಕ್ಷಕರಿಗೆ ಅನುಕೂಲವಾಗಲಿದೆ. ಸಂಪುಟ ಸಭೆ ಶುಕ್ರವಾರವೇ ನಡೆಯಬೇಕಿತ್ತಾದರೂ ಕಾರಣಾಂತರಗಳಿಂದ ಸೋಮವಾರಕ್ಕೆ ಮುಂದೂಡಲಾಗಿದೆ.

ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ) ಅಧಿನಿಯಮ 2020ನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಹೊಸ ಶಿಕ್ಷಣ ಹಕ್ಕು ಕಾಯ್ದೆ ಅಡಿ ಕೆಲವು ಮಾರ್ಪಾಡುಗಳು ಆಗಬೇಕೆಂದು ಶಿಕ್ಷಕರು ಒತ್ತಾಯಿಸಿದ್ದರಿಂದ ಕೆಲವು ನಿಯಮಗಳನ್ನು ಸೇರ್ಪಡೆ ಮಾಡಿರು ವುದಾಗಿ ತಿಳಿದು ಬಂದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ನವೆಂಬರ್​ನಲ್ಲೇ 2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಿತ್ತು. ವರ್ಗಾವಣೆ ಬಯಸಿ 70 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಹಿಂದಿನ ವರ್ಗಾವಣೆ ಕಾಯ್ದೆಯಲ್ಲಿ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಗೆ ಸಿಲುಕಿ ಸಾಕಷ್ಟು ಶಿಕ್ಷಕರು ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net