ಕೋವಿಡ್ ಅಬ್ಬರ: ಆಸ್ಪತ್ರೆಗಳ ಪ್ರವೇಶ ದ್ವಾರದಲ್ಲಿ ರಾಜಾಜಿಸುತ್ತಿವೆ 'ಹಾಸಿಗೆ ಇಲ್ಲ' ಎಂಬ ಫಲಕಗಳು!

no beds
Published on

ಬೆಂಗಳೂರು: ಕೋವಿಡ್ ಸೋಂಕು ತೀವ್ರ ಏರಿಕೆಯಿಂದಾಗಿ ನಗರದಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆಗೆ ಹಾಸಿಗೆಗಳು ಸಿಗದೆ ಪರದಾಡುವುದು ಮುಂದುವರಿದಿದೆ. ಕೋವಿಡ್ ಸೋಂಕಿತರು ಮಾತ್ರವಲ್ಲದೆ, ಸೋಂಕು ರಹಿತ ನಾನಾ ಕಾಯಿಲೆಯಿಂದ ಬಳಲುತ್ತಿರುವವರಿಗೂ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ಮತ್ತೊಂದೆಡೆ ಆಸ್ಪತ್ರೆಗಳ ಗೇಟುಗಳಲ್ಲಿ ಹಾಸಿಗೆ ಇಲ್ಲ ಎಂಬ ಫಲಕಗಳು ತೂಗುತ್ತಿದ್ದು, ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.

ಬೆಂಗಳೂರಿನ ಶಿವಾಜಿನಗರದ ಚರಕ ಆಸ್ಪತ್ರೆಯಲ್ಲಿ ಒಂದು ದಿನದ ಹಿಂದಷ್ಟೇ ಕೋವಿಡ್ ರೋಗಿಗಳಿಗೆ 150 ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಆದರೆ ಎಲ್ಲಾ ಹಾಸಿಗೆಗಳು ಒಂದೇ ದಿನದಲ್ಲಿ ಭರ್ತಿಯಾಗಿದ್ದು, ಆಸ್ಪತ್ರೆ ಗೇಟ್ ನಲ್ಲಿ ಹಾಸಿಗೆ ಇಲ್ಲ ಎಂಬ ಫಲಕ ತೂಕುಹಾಕಲಾಗಿದೆ.

ಇದೊಂದೇ ಆಸ್ಪತ್ರೆಯಲ್ಲ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಇದೇ ಸ್ಥಿತಿ ಇದ್ದು, ಹಾಸಿಗೆ ಇಲ್ಲದ ಕಾರಣ ಅಂಬುಲೆನ್ಸ್ ಗೂ ಒಳಗೆ ಪ್ರವೇಶ ನೀಡುತ್ತಿಲ್ಲ. ಹೀಗಾದರೆ ನಾಮಗೆ ಚಿಕಿತ್ಸೆ ಪಡೆಯಲಾಗದೆ ಬೀದಿ ಹೆಣವಾಗಬೇಕಾಗುತ್ತದೆ ಎಂದು ಸೋಂಕಿತರ ಕುಟುಂಬಸ್ಥರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೂ ರೋಗಿಯನ್ನು ಒಳಗೆ ಸೇರಿಸಿಕೊಳ್ಳುತ್ತಿಲ್ಲ. ಹೋಗಲಿ ಆಕ್ಸಿಜನ್ ಆದರೂ ಹೊರಗೇ ಚಿಕಿತ್ಸೆ ಕೊಡಿ ಎಂದರೂ ಕೇಳುತ್ತಿಲ್ಲ. ಈಗಾಗಲೇ ದಾಖಲಾಗಿರುವ ರೋಗಿಗಳಿಗೇ ಆಕ್ಸಿಜನ್ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಗೋಳಿಟ್ಟರು.

ನಗರದ ಹಲವು ಆಸ್ಪತ್ರೆಗಳ ಎದುರು ಇದೇ ರೀತಿ ಹಾಸಿಗೆ ಇಲ್ಲ ಎಂಬ ಫಲಕಗಳನ್ನು ಹಾಕಲಾಗಿದ್ದು, ಸೋಂಕಿತರು ಪರದಾಟ ಹೇಳತೀರದಾಗಿದೆ. ಹಾಗಾಗಿ ಜನರು ಇನ್ನಾದರೂ ಜಾಗೃತರಾಗಿ ಮನೆಯಲ್ಲೇ ಇರಿ, ಕೋವಿಡ್ ನಿಯಮ ಪಾಲಿಸಿ, ಸೋಂಕು ಹರಡುವುದನ್ನು ನಿಯಂತ್ರಿಸಲು ಸಹಕರಿಸಿ ಎಂದು ವೈದ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net