

ತೀರ್ಥಹಳ್ಳಿ: ಬಗರ್‌ಹುಕುಂ ಒತ್ತುವರಿ ತೆರವು ವಿರೋಧಿಸಿ ರಾಜ್ಯ ರೈತ ಸಂಘ, ಡಿಎಸ್‌ಎಸ್, ಮಲೆನಾಡು ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಿಂತ ಮೊದಲು ಬಗರ್‌ಹುಕುಂ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದ ಮೂರೂ ಪಕ್ಷಗಳ ಮುಖಂಡರು ಈಗ ಮೌನವಾಗಿದ್ದಾರೆ. ರೈತರ ಬದುಕಿಗೆ ಮಾರಕವಾಗಿರುವ ಬಗರ್‌ಹುಕುಂ ಸಮಸ್ಯೆ ಕುರಿತಂತೆ ಕಾರ್ಯಾಂಗವನ್ನು ನಿಯಂತ್ರಿಸುವ ಶಕ್ತಿ ಶಾಸಕಾಂಗಕ್ಕೆ ಇಲ್ಲವೇ? ಚುನಾವಣೆಗೆ ಮುಂಚೆ ಜನತೆಗೆ ನೀಡಿದ ಭರವಸೆಯಂತೆ ಜನರಿಂದ ಆಯ್ಕೆಯಾದವರು ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್ ಆಗ್ರಹಿಸಿದರು.
ಮಲೆನಾಡು ಹೋರಾಟ ಸಮಿತಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಒತ್ತುವರಿ ತೆರವಿನ ಆದೇಶಕ್ಕೆ ಸಂಬಂಧಿಸಿ ಮಲೆನಾಡು ಭಾಗವನ್ನು ಪ್ರತಿನಿಧಿಸುವ 80 ಮಂದಿ ಶಾಸಕರ ಪೈಕಿ ಒಬ್ಬರೂ ಸದನದಲ್ಲಿ ಚಕಾರ ಎತ್ತದಿರುವುದು ಖಂಡನೀಯ. ಆಡಳಿತ ವ್ಯವಸ್ಥೆಯಲ್ಲಿ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆ ನೀಡಿರುವ ಹಕ್ಕುಪತ್ರ ರದ್ದಾಗುವುದಾದರೆ ತಾಲೂಕು ಕಚೇರಿಗೆ ಬೀಗ ಹಾಕುವುದೇ ಸೂಕ್ತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಡಿಗೆ ಬೆಳಕು, ಜೀವಜಲ ನೀಡುತ್ತಿರುವ ಶರಾವತಿ, ವರಾಹಿ, ಭದ್ರಾ ಗಾಜನೂರು ಡ್ಯಾಂ ನಿರ್ಮಾಣಕ್ಕೆ ಭೂಮಿ ತ್ಯಾಗ ಮಾಡಿರುವ ಮಲೆನಾಡಿನ ರೈತರನ್ನೇ ಕಳ್ಳರಂತೆ ಗ್ರಹಿಸಲಾಗಿದೆ. ಕೃಷಿಕರಿಗೆ ಸಹಜ ನ್ಯಾಯ ಕೊಡುವಂತೆ ಸುಪ್ರೀಂ ಕೋರ್ಟ್ ಸಹ ಆದೇಶ ನೀಡಿದೆ. ಸರ್ಕಾರಿ ಆದೇಶ ಆಗುವವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಭೂಮಿಗೆ ಕಾಲಿಡಕೂಡದು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಚಂದವಳ್ಳಿ ಸೋಮಶೇಖರ್ ಮಾತನಾಡಿ, 1935ರಲ್ಲಿ ಸರ್ವೇ ಆಧಾರದಲ್ಲಿ ಕಾಯ್ದೆ ಜಾರಿಗೆ ತಂದಿರುವುದು ರೈತ ವಿರೋಧಿ ನೀತಿ. ಈ ವಿಚಾರದಲ್ಲಿ ಕಂದಾಯ ಇಲಾಖೆ ಮೌನವಾಗಿದೆ ದೂರಿದರು.
ಒತ್ತುವರಿ ತೆರವು ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು ಈ ಕಾಯ್ದೆಯನ್ನು ಹಿಂಪಡೆಯಲು ಎಲ್ಲ 224 ಶಾಸಕರು ಮುಂದಾಗಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಒತ್ತಾಯಿಸಿದರು.
ರೈತ ಮುಖಂಡ ಕಂಬ್ಳಿಗೆರೆ ರಾಜೇಂದ್ರ, ಮುಖಂಡರಾದ ನೆಂಪೆ ದೇವರಾಜ್, ಕೋಡ್ಲು ವೆಂಕಟೇಶ್, ಹೊರಬೈಲು ರಾಮಕೃಷ್ಣ, ಶಿವಾನಂದ ಕರ್ಕಿ, ವೆಂಕಟೇಶ ಹೆಗ್ಡೆ, ನಿಶ್ಚಲ್ ಜಾದೂಗಾರ್ ಇತರರಿದ್ದರು.