

ನವದೆಹಲಿ: ಅದಾನಿ ಉದ್ಯಮ ಸಮೂಹಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ತಕ್ಷಣದ ಚರ್ಚೆಗೆ ಒಪ್ಪಿಗೆ ನೀಡಲು ಸರ್ಕಾರ ನಿರಾಸಕ್ತಿ ತೋರುತ್ತಿರುವುದರಿಂದಲೇ ಸಂಸತ್ತಿನ ಉಭಯ ಸದನ ಗಳನ್ನು ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದಾನಿ ಭ್ರಷ್ಟಾಚಾರ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ, ಕೇಂದ್ರ ವಿಪಕ್ಷಗಳ ಆಗ್ರಹವನ್ನು ಪರಿಗಣಿಸಿಲ್ಲ. ಅದಾನಿ ಗ್ರೂಪ್ಗೆ
ಸಂಬಂಧಿಸಿದ ಲಂಚದ ಆರೋಪ ಸೇರಿ ವಿವಿಧ ವಿಷಯಗಳ ಬಗ್ಗೆ ಪ್ರತಿಪಕ್ಷಗಳ ಪ್ರತಿಭಟನೆ ಹೆಚ್ಚಾದ ಹಿನ್ನೆಲೆಯಲ್ಲಿ ಲೋಕಸಭೆ, ರಾಜ್ಯಸಭೆಯ ಕಲಾಪ ಮುಂದೂಡಲಾಯಿತು. ಅದಾನಿ ವಿವಾದ ಮತ್ತು ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರತಿಪಕ್ಷಗಳ ಪ್ರತಿಭಟನೆ ಪರಿಣಾಮ ಬುಧವಾರ ಕಲಾಪ ಹೆಚ್ಚಿನ ಅವಧಿಗೆ ನಡೆಯಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ನಡುವಿನ ಸ್ನೇಹ ಸಂಬಂಧ ಹಾಗೂ ಇಡೀ ಹಗರಣ ಜಾಗತಿಕ ಪರಿಣಾಮಗಳನ್ನು ಹೊಂದಿದೆ. ಹೀಗಾಗಿ, ಈ ಹಗರಣದ ಬಗ್ಗೆ ಜೆಪಿಸಿ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಮತ್ತು ಇನ್ನೊಬ್ಬ ಪ್ರಮುಖ ಕಾರ್ಯನಿರ್ವಾಹಕ ಅಧಿಕಾರಿಗಳು 20 ವರ್ಷಗಳ ಅವಧಿಯಲ್ಲಿ 2 ಬಿಲಿಯನ್ ಅಮೆರಿಕನ್ ಡಾಲರ್ ಬಿಲಿಯನ್ ವೆಚ್ಚದ ಸೌರ ವಿದ್ಯುತ್ ಪೂರೈಕೆಯ ಉದ್ಯಮಗಳ ಒಪ್ಪಂದ ಪಡೆದುಕೊಳ್ಳಲು ಭಾರತೀಯ ಅಧಿಕಾರಿಗಳಿಗೆ 265 ಅಮೆರಿಕನ್ ಮಿಲಿಯನ್ ಲಂಚ ನೀಡುವ ಯೋಜನೆಯ ಭಾಗ ಆಗಿದ್ದಾರೆಂದು ಅಮೆರಿಕ ನ್ಯಾಯಾಂಗ ಇಲಾಖೆ ಆರೋಪಿಸಿದೆ.
ಪ್ರತಿಭಟನಾಕಾರರಿಂದಲೇ ಹಾನಿ ದಂಡ ವಸೂಲಿ: ಕೆಲವು ದಿನಗಳ ಹಿಂದೆ ಉತ್ತರಪ್ರದೇಶದ ಸಂಭಾಲ್ನಲ್ಲಿ ನಡೆದ ಹಿಂಸಾಚಾರದಿಂದ ಆಸ್ತಿಪಾಸ್ತಿಗೆ ಆಗಿರುವ ಹಾನಿಯನ್ನು ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಂದಲೇ ವಸೂಲಿ ಮಾಡಲು ಸರ್ಕಾರ ನಿರ್ಧರಿಸಿದೆ. ಕಲ್ಲು ತೂರಾಟದಲ್ಲಿ ಭಾಗವಹಿಸಿದವರ ಪೋಸ್ಟರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದೆಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಭಾಗವಹಿಸಿದವರ ಫೊಟೋಗಳನ್ನು ಸಂಭಾಲ್ ಪೊಲೀಸರು ಪ್ರಕಟಿಸಿದ್ದಾರೆ. ಅವರಲ್ಲಿ ಒಂಬತ್ತು ಜನರನ್ನು ಗುರುತಿಸಲಾಗಿದೆ. ಮುಖದ ಮೇಲೆ ಮಾಸ್ಕ್ ತೊಟ್ಟವರ ಹಾಗೂ ಇತರರನ್ನು ಗುರುತಿಸಲು ನೆರವಾಗುವಂತೆ ಅವರು ಜನರಿಗೆ ಮನವಿ ಮಾಡಿದ್ದಾರೆ. ಆಗಿರುವ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲಾಗುವುದೆಂದು ಉತ್ತರ ಪ್ರದೇಶದ ಸಚಿವರಾದ ಧರ್ಮವೀರ್ ಪ್ರಜಾಪತಿ ಮತ್ತು ನರೇಂದ್ರ ಕಶ್ಯಪ್ ಹೇಳಿದ್ದರು. ಕೋರ್ಟ್ ಆದೇಶದ ಮೇರೆಗೆ ಸಂಭಾಲ್ನ ಕೋಟ್ ಗರ್ವಿ ಪ್ರದೇಶದ ಷಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುತ್ತಿದ್ದಾಗ ಸಂಭವಿಸಿದ ಗಲಭೆಗಳಲ್ಲಿ ಐವರು ಮೃತಪಟ್ಟಿದ್ದರು.
ನಷ್ಟದ ಅಂದಾಜು: ಹಿಂಸಾಚಾರದಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಆಗಿರುವ ನಷ್ಟದ ಅಂದಾಜು ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೃಷ್ಣ ಕುಮಾರ್ ಹೇಳಿದ್ದಾರೆ. ಮಸೀದಿ ಮೇಲೆಯೂ ಕಲ್ಲುಗಳನ್ನು ತೂರಲಾಗಿತ್ತು. ಪೊಲೀಸ್ ವಾಹನಗಳು, ಟ್ರಾನ್ಸ್ಫಾರ್ಮರ್ ಮತ್ತು ವಿದ್ಯುತ್ ತಂತಿಗಳು ಹಾನಿಯಾಗಿವೆ ಎಂದವರು ವಿವರಿಸಿದ್ದಾರೆ.
ಗೌತಮ್ ಅದಾನಿ ಆರೋಪ ಒಪ್ಪಿಕೊಳ್ಳುವುದಿಲ್ಲ, ನಿಸ್ಸಂಶ ಯವಾಗಿ ಅವರು ಆರೋಪ ನಿರಾಕರಿ ಸುತ್ತಾರೆ. ಆದರೆ ನೂರಾರು ಜನರನ್ನು ಸಣ್ಣ ಆರೋಪದಲ್ಲಿ ಬಂಧಿಸಲಾಗುತ್ತಿದೆ. ಹಾಗೆಯೇ ಗಂಭೀರ ಆರೋಪ ಎದುರಿಸುತ್ತಿರುವ ಅದಾನಿಯನ್ನೂ ಬಂಧಿಸಬೇಕು.
| ರಾಹುಲ್ ಗಾಂಧಿ ಲೋಕಸಭೆ ವಿಪಕ್ಷ ನಾಯಕ
ಜಾಮಾ ಮಸೀದಿಯ ಎರಡನೇ ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡಿಲ್ಲ. ಅಡ್ವೊಕೇಟ್ ಕಮಿಷನರ್ ಅವರ ಆದೇಶದ ಮೇರೆಗೆ ಅದನ್ನು ಕೈಗೊಳ್ಳಲಾಗಿತ್ತು.
| ಗೋಪಾಲ್ ಶರ್ಮಾ ಹಿಂದು ಪರ ವಕೀಲ