

ನವದೆಹಲಿ: ನವೆಂಬರ್ 24-25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರು ಸೇರಿದಂತೆ ಒಟ್ಟು 182 ಮಂದಿ ಆಟಗಾರರು ತಂಡಗಳಿಗೆ ಮಾರಾಟವಾಗಿದ್ದು, 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದ್ದು, ಒಟ್ಟು 8 ಆರ್ಟಿಮ್ ಬಳಕೆ ಮಾಡಲಾಗಿದೆ. ಅದರಂತೆ ಈ ಬಾರಿಯ ಟೂರ್ನಿಯಲ್ಲಿ ಹೊಸತನದೊಂದಿಗೆ ಕಣಕ್ಕಿಳಿಯುತ್ತಿರುವ ಆರ್‌ಸಿಬಿ (RCB) ಎರಡು ದಿನಗಳ ಕಾಲ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 19 ಆಟಗಾರರನ್ನು ಖರೀದಿಸಿತ್ತು. 7 ವರ್ಷ ಆಡಿದ್ದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಮಾಜಿ ನಾಯಕ ಫಾಫ್ ಡು ಪ್ಲೆಸ್ಸಿಸ್ (Faf Du Plessis) ಸೇರಿದಂತೆ ಹಲವರಿಗೆ ಗೇಟ್ಪಾಸ್ ನೀಡಲಾಗಿದ್ದು, 18ನೇ ಆವೃತ್ತಿಯಲ್ಲಿ ಬಲಿಷ್ಠ ತಂಡ ಕಟ್ಟುವ ಮುನ್ಸೂಚನೆಯನ್ನು ಫ್ರಾಂಚೈಸಿ ನೀಡಿದೆ.
ಏಳು ವರ್ಷಗಳ ಕಾಲ ಆರ್ಸಿಬಿಯ ಭಾಗವಾಗಿದ್ದ ಮೊಹಮ್ಮದ್ ಸಿರಾಜ್ (Mohammed Siraj) ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆರ್‌ಸಿಬಿ ಫ್ರಾಂಚೈಸಿ ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಇದೀಗ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸ್ಸಿಸ್ (Faf Du Plessis) ಕೂಡ ಆರ್‌ಸಿಬಿ ಫ್ರಾಂಚೈಸಿ ಹಾಗೂ ಅಭಿಮಾನಿಗಳ ಕುರಿತಾಗಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಆರ್‌ಸಿಬಿ (RCB) ಜೊತೆಗಿನ ನನ್ನ ಅಧ್ಯಾಯ ಮುಗಿದಿದ್ದು, ಫ್ರಾಂಚೈಸಿ ಜೊತೆಗಿನ ಈ ಮೂರು ವರ್ಷಗಳ ಪ್ರಯಾಣ ಅದ್ಭುತವಾಗಿತ್ತು. ನಾನು ಮೂರು ವರ್ಷಗಳ ಹಿಂದೆ ಆರ್‌ಸಿಬಿ ಸೇರಿದಾಗ, ಈ ಪ್ರಯಾಣವು ಇಷ್ಟು ಅದ್ಭುತವಾಗಿ ಆರಂಭವಾಗುತ್ತದೆ ಎಂದು ತಿಳಿದಿರಲಿಲ್ಲ. ಬೆಂಗಳೂರು ನಗರ ಮತ್ತು ಆರ್‌ಸಿಬಿ ಅಭಿಮಾನಿಗಳೆಂದರೆ ನನಗೆ ತುಂಬಾ ಅಚ್ಚುಮೆಚ್ಚು. ಬೆಂಗಳೂರು ಮತ್ತು ಅಲ್ಲಿನ ಜನರು ನನ್ನ ವ್ಯಕ್ತಿತ್ವದ ಭಾಗವಾಗಿದ್ದಾರೆ. ನಾನು ಯಾವಾಗಲೂ ಈ ನೆನಪುಗಳನ್ನು ಮತ್ತು ಒಡನಾಟವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಈ ಮೂರು ವರ್ಷಗಳನ್ನು ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಆಡುವುದು ನನ್ನ ವೃತ್ತಿಜೀವನದ ಶ್ರೇಷ್ಠ ಅನುಭವಗಳಲ್ಲಿ ಒಂದಾಗಿದೆ. ಅಭಿಮಾನಿಗಳ ಶಕ್ತಿ, ಉತ್ಸಾಹ ಮತ್ತು ಬೆಂಬಲವು ಅದನ್ನು ನಿಜವಾಗಿಯೂ ಅನನ್ಯಗೊಳಿಸುತ್ತದೆ. ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ಅಲ್ಲಿನ ವಾತಾವರಣ ಮಾಂತ್ರಿಕತೆಯಿಂದ ಕೂಡಿರುತ್ತಿತ್ತು. ವಿದಾಯ ಹೇಳುವುದಕ್ಕೂ ಮುನ್ನ ನಾನು, ಅಭಿಮಾನಿಗಳು, ನನ್ನ ತಂಡದ ಸದಸ್ಯರು, ಸಿಬ್ಬಂದಿ, ತರಬೇತುದಾರರು ಮತ್ತು ಮಾಲೀಕರು ಸೇರಿದಂತೆ ಎಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಿಮ್ಮೊಂದಿಗೆ ಈ ಪ್ರಯಾಣದ ಭಾಗವಾಗಿದ್ದು, ನನಗೆ ಗೌರವವಾಗಿದೆ. ಮಚ್ ಲವ್ ಎಂದು ಆರ್‌ಸಿಬಿ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸ್ಸಿಸ್ (Faf Du Plessis) ಸುದೀರ್ಘ ಪೋಸ್ಟ್ ಒಂದನ್ನು ಬರೆದು ಹಂಚಿಕೊಂಡಿದ್ದಾರೆ.