

ಒಂದಷ್ಟು ಆತ್ಮವಿಶ್ವಾಸ, ಒಂದಷ್ಟು ಧೈರ್ಯ-ಹುಮ್ಮಸ್ಸು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ, ಹೊರಗಿನ ಆಗುಹೋಗುಗಳತ್ತ ಗಮನ ಇಡುವ ಮೂಲಕ, ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ ನಾನಾ ಕ್ಷೇತ್ರಗಳ ಪ್ರಮುಖರು. ಆಲ್ ದಿ ಬೆಸ್ಟ್!
| ಯಂಕಣ್ಣ ಯರಾಶಿ ಪ್ರಗತಿಪರ ಕೃಷಿಕ, ಕೊಪ್ಪಳ
ಕೃಷಿ ಎಂಬುದು ಶಾಶ್ವತ ಉದ್ಯೋಗ. ಕರೊನಾ ಬಂದ ಮೇಲೆ ಅನೇಕರಿಗೆ ಇದರ ಅರಿವಾಗಿದೆ. ಯುವಕರು, ವಿದ್ಯಾವಂತರು ಹೆಚ್ಚಾಗಿ ಇತ್ತ ವಾಲಬೇಕು. ತೋಟಗಾರಿಕೆ ಬೆಳೆಗಳಿಂದ ಆರಂಭದಲ್ಲಿ ಲಾಭ ಬರುವುದಿಲ್ಲ. ಆದರೆ, ನಿರಂತರ ಆದಾಯ ಬರುತ್ತದೆ. ಸಣ್ಣ ಪುಟ್ಟ ಉದ್ಯೋಗದೊಂದಿಗೆ ತೋಟಗಾರಿಕೆಯನ್ನು ಆಯ್ದುಕೊಳ್ಳಬಹುದು. ವೈಜ್ಞಾನಿಕ, ಸಾವಯವ ಪದ್ಧತಿ ಅಳವಡಿಸಿಕೊಂಡರೆ ಉತ್ತಮ. ಉತ್ಪನ್ನದ ಮೌಲ್ಯವರ್ಧನೆ ಮಾಡುವುದರಿಂದ ಲಾಭ ಹೆಚ್ಚು. ಇತರ ಕ್ಷೇತ್ರಗಳಂತೆ ಈ ರಂಗದಲ್ಲೂ ನಿರಂತರ ಅಧ್ಯಯನ ಅಗತ್ಯ. ಉದ್ಯಮ ಬೆಳವಣಿಗೆಗೆ ಅನುಸರಿಸುವ ತಂತ್ರಗಳಂತೆ ಕೃಷಿಯನ್ನು ಒಂದು ಉದ್ಯಮವಾಗಿ ಪರಿಗಣಿಸಿ ಮಾರುಕಟ್ಟೆ ತಂತ್ರ ರೂಪಿಸಬೇಕು. ಸ್ಥಳೀಯ ಮಾರುಕಟ್ಟೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಜ್ಞಾನ ತಿಳಿದುಕೊಂಡಲ್ಲಿ ಸುಲಭವಾಗಿ ಉತ್ಪನ್ನ ಮಾರಾಟ ಮಾಡಬಹುದು. ಸರ್ಕಾರ ಸಬ್ಸಿಡಿ ಆಧಾರಿತ ಯೋಜನೆ ನೀಡುವ ಬದಲು, ಮಾರುಕಟ್ಟೆ ಪ್ರೋತ್ಸಾಹ ಯೋಜನೆ ರೂಪಿಸಿದರೆ ಅನುಕೂಲ.