

ಕಳೆದೆರಡು ವರ್ಷಗಳಿಂದ ಕರೊನಾ ಹಾವಳಿ. ಜನಜೀವನಕ್ಕೆ ಸಂಕಟದ ಬಳುವಳಿ. ಹಾಗಂತ ಜೀವನ ಸಾಗಲೇಬೇಕು. ಮನೋಸ್ಥೈರ್ಯವನ್ನು ಹಿಗ್ಗಿಸಿಕೊಂಡು ಕತ್ತೆತ್ತಿ ನೋಡಿದರೆ ಹತ್ತೆಂಟು ದಾರಿಗಳು. ನಡೆ ಮುಂದೆ ನಡೆ ಮುಂದೆ.... ಎಂಬುದೇ ಮಂತ್ರ. ಆಗ ಜೀವನಕ್ಕಿದೆ ನಾನಾ ತಂತ್ರ. ಆವಿಷ್ಕಾರ, ನಾವೀನ್ಯತೆ, ಸಾಹಸಕ್ಕೆ ಜಗತ್ತಿನಲ್ಲುಂಟು ಮನ್ನಣೆ. 2021ರ ಕಹಿನೆನಪುಗಳನ್ನು ಹಿಂದಿಕ್ಕಿ, 2022ರಲ್ಲಿ ಹೊಸ ದಾರಿಯಲ್ಲಿ ಹೆಜ್ಜೆ ಮುಂದಿಡಲು ನಾನಾ ರಂಗಗಳ ಗಣ್ಯರು ಇಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಸರ್ವರಿಗೂ ಹೊಸ ವರ್ಷ ಹರ್ಷದಾಯಕವಾಗಲಿ ಎಂಬುದು ವಿಜಯವಾಣಿ ಆಶಯ.
| ವಿಜಯ್ ಕಿರಗಂದೂರು ನಿರ್ಮಾಪಕ- ಹೊಂಬಾಳೆ ಫಿಲಂಸ್
ಮುಂದಿನ ದಿನಗಳಲ್ಲಿ ಮನರಂಜನಾ ಕ್ಷೇತ್ರವು ಸಿನಿಮಾಗೆ ಸೀಮಿತವಾಗುವುದಿಲ್ಲ. ಗೇಮಿಂಗ್, ರಿಯಾಲಿಟಿ ಶೋಗಳು ಸಹ ಇದೇ ಕ್ಷೇತ್ರಕ್ಕೆ ಒಳಪಡುತ್ತವೆ. ಡಿಜಿಟಲ್ ಯುಗ ಶುರುವಾಗಿರುವುದರಿಂದ ಚಲನಚಿತ್ರ ನಿರ್ಮಾಣ ಒಂದು ಆಯಾಮವಾದರೆ, ಪರ್ಯಾಯವಾಗಿ ಇನ್ನೊಂದು ಆಯಾಮವೂ ಇದೆ. ಪ್ರಮುಖವಾಗಿ ಚಿತ್ರಗಳಲ್ಲಿ ವಿಎಫ್ಎಕ್ಸ್, ಗ್ರಾಫಿಕ್ಸ್ ಬಳಕೆ ಹೆಚ್ಚಾಗುತ್ತಿದೆ. ಐತಿಹಾಸಿಕ ಅಥವಾ ಪೌರಾಣಿಕ ಚಿತ್ರಗಳ ನಿರ್ಮಾಣ ಹೆಚ್ಚಾದಂತೆ, ಕಲಾವಿದರು ಮತ್ತು ತಂತ್ರಜ್ಞರು ಅದೆಷ್ಟು ಮುಖ್ಯವೋ, ಗ್ರಾಫಿಕ್ಸ್ ಸಹ ಅಷ್ಟೇ ಹೆಚ್ಚಾಗುತ್ತಿದೆ. ಚಿತ್ರಗಳಲ್ಲಿ ಗ್ರಾಫಿಕ್ಸ್ ಬಳಕೆ ಹೆಚ್ಚಾಗುತ್ತಿರುವುದರಿಂದಲೇ, ಚಿತ್ರ ಬಿಡುಗಡೆ ನಿಧಾನವಾಗುತ್ತಿದೆ. ಹಾಗಾಗಿ, ದೊಡ್ಡದೊಡ್ಡ ನಿರ್ಮಾಣ ಸಂಸ್ಥೆಗಳು ತಮ್ಮದೇ ವಿಎಫ್ಎಕ್ಸ್ ಸ್ಟುಡಿಯೋಗಳನ್ನು ನಿರ್ವಿುಸುತ್ತಿವೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಸಹ ನಮ್ಮದೇ ಒಂದು ವ್ಯವಸ್ಥೆ ಮಾಡಿ ಕೊಳ್ಳುವ ಅಗತ್ಯ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಿಗೆ ಮೊರೆ ಹೋಗಬೇಕಿದೆ. ಈಗಾಗಲೇ ಅಲ್ಲಿ ಸಾಕಷ್ಟು ಬ್ಯಾಕ್ಲಾಗ್ ಇದ್ದು, ಅದರಿಂದ ನಮ್ಮ ಕೆಲಸಗಳು ನಿಧಾನವಾಗುತ್ತಿವೆ. ನಮ್ಮದೇ ವ್ಯವಸ್ಥೆ ಮಾಡಿಕೊಳ್ಳುವ ಯೋಚನೆ ಇದೆ. ಸಂಗೀತ ಮಿಕ್ಸಿಂಗ್ ಇರಬಹುದು, ವಿಎಫ್ಎಕ್ಸ್ ಇರಬಹುದು... ನಮ್ಮದೇ ವ್ಯವಸ್ಥೆ ಇದ್ದರೆ, ಬೇರೆ ಚಿತ್ರಗಳಿಗೂ ಸಹಾಯವಾಗುತ್ತದೆ. ಕೋವಿಡ್ನಿಂದಾಗಿ ಕೆಲಸಗಳು ನಿಧಾನ ವಾಗಿದ್ದು, ಮುಂದಿನ ದಿನಗಳಲ್ಲಿ ಕೈಗೂಡಲಿದೆ. ಇದರಿಂದ ಸಾಕಷ್ಟು ಸಂಖ್ಯೆಯ ಮತ್ತು ವಿಭಿನ್ನವಾದ ಉದ್ಯೋಗಗಳು ಸಹ ಸೃಷ್ಟಿಯಾಗಲಿವೆ.