ಹಳ್ಳಿಯ ಹಣವನ್ನು ಹಳ್ಳಿಯಲ್ಲೇ ಉಳಿಸೋಣ: ಆಕಾಶದಷ್ಟು ಅವಕಾಶ..

Madhuchandran
Published on

ಒಂದಷ್ಟು ಆತ್ಮವಿಶ್ವಾಸ, ಒಂದಷ್ಟು ಧೈರ್ಯ-ಹುಮ್ಮಸ್ಸು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ, ಹೊರಗಿನ ಆಗುಹೋಗುಗಳತ್ತ ಗಮನ ಇಡುವ ಮೂಲಕ, ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ ನಾನಾ ಕ್ಷೇತ್ರಗಳ ಪ್ರಮುಖರು. ಆಲ್ ದಿ ಬೆಸ್ಟ್!


| ಎಸ್.ಸಿ. ಮಧುಚಂದನ್ ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ

ರೈತರು ತಮ್ಮತನವನ್ನು ಬಿಟ್ಟು ಪಾಶ್ಚಿಮಾತ್ಯ ಕೃಷಿಗೆ ಒತ್ತು ಕೊಟ್ಟ ಪರಿಣಾಮದಿಂದ ಇಂದು ಏಕಬೆಳೆ ಬೇಸಾಯ, ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಹೇರಳವಾಗಿ ಬಳಸುತ್ತಿದ್ದಾರೆ. ಪರಿಣಾಮ, ಕೃಷಿಗೆ ತಗಲುವ ಖರ್ಚು ಹೆಚ್ಚಾಗಿ ನಮ್ಮ ರೈತರು ಆರ್ಥಿಕವಾಗಿ ಜರ್ಜರಿತರಾಗುತ್ತಿದ್ದಾರೆ. ಇದರಿಂದ ಕೆಲ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ನನ್ನ ಗ್ರಾಮ ಸೂನಗಹಳ್ಳಿಯಲ್ಲಿ 3,500 ಜನರಿದ್ದಾರೆ. ನನ್ನೂರಿನ ರೈತರಿಗೆ 1 ಸಾವಿರ ಎಕರೆ ಜಮೀನಿದೆ. ಸರಾಸರಿ ಒಬ್ಬ ರೈತರು 30 ಗುಂಟೆ ಜಮೀನು ಹೊಂದಿದ್ದು, ಇದರಲ್ಲಿ ಶೇ.70ರಿಂದ 75ರಷ್ಟು ರೈತರು ಕಬ್ಬು ಬೆಳೆಯುತ್ತಾರೆ. ಕಾಳುಕಡ್ಡಿ, ಸೊಪ್ಪು, ತರಕಾರಿ, ಹಣ್ಣುಗಳಿಗಾಗಿ ಶೇ.70ರಿಂದ 90ರಷ್ಟು ಜನರು ಪಟ್ಟಣವನ್ನು ಅವಲಂಬಿಸಿದ್ದಾರೆ. ಗ್ರಾಮೀಣ ಜನರು ಬಳಸುವ ಪದಾರ್ಥಗಳು ಹಳ್ಳಿಯಲ್ಲಿ ಉತ್ಪಾದನೆಯಾಗುತ್ತಿಲ್ಲ. ಇನ್ನು ಬೆಳೆಯುತ್ತಿರುವ ರಾಗಿ, ಭತ್ತ, ಬಾಳೆ ನೇರವಾಗಿ ಮಾರಾಟವೂ ಆಗುತ್ತಿಲ್ಲ. ಅಂಗೈಯಲ್ಲೇ ಮಾರುಕಟ್ಟೆ ಇದ್ದರೂ ಅದನ್ನು ರೈತರು ಬಳಸಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಗ್ರಾಮದಲ್ಲಿ ಬಹುಉತ್ಪನ್ನ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ, ಒಬ್ಬೊಬ್ಬರು ಒಂದೊಂದು ಬೆಳೆಯನ್ನು ಬೆಳೆಯಲು ತೀರ್ವನಿಸಬೇಕು. ಬಳಿಕ ತಮಗೆ ಬೇಕಾದಷ್ಟು ಇಟ್ಟುಕೊಂಡು ಉಳಿದವನ್ನು ಹೊರಗೆ ಮಾರಾಟ ಮಾಡಬೇಕು. ಆಗ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net