

ಪ್ರಕೃತಿನಗರ(ಸೇಡಂ): ಸಮಾಜದಲ್ಲಿ ಗೆದ್ದವರನ್ನು ಮೆರೆಸಲಾಗುತ್ತದೆ. ಆದರೆ ಯಶಸ್ಸಿಗಾಗಿ ಹಲವಾರು ಪ್ರಯತ್ನ ಮಾಡಿ ಸೋತವರು ಹಾಗೂ ಜಿಗುಪ್ಸೆಗೊಂಡವರ ಬಗ್ಗೆ ಕಾಳಜಿವಹಿಸಬೇಕು. ಅವರ ಬದುಕು ರೂಪಿಸಲು ಶ್ರಮಿಸಬೇಕು. ವೈಯಕ್ತಿಕವಾಗಿ ನಾವು ಎಷ್ಟು ಬೆಳೆದಿದ್ದೇವೆ ಎಂಬುದಕ್ಕಿಂತ ಸಮಾಜದಲ್ಲಿ ನಾವೇನು ಬದಲಾವಣೆ ತಂದಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎನ್ನುವ ಮೂಲಕ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಉದ್ಯಮಶೀಲತೆಯಲ್ಲಿ ಮಾನವೀಯ ಸಂವೇದನೆಯ ಅಗತ್ಯವನ್ನು ಪ್ರತಿಪಾದಿಸಿದರು.
7ನೇ ಭಾರತೀಯ ಸಂಸ್ಕೃತಿ ಉತ್ಸವದ ಸ್ವಯಂ ಉದ್ಯೋಗ ಸಮಾವೇಶದಲ್ಲಿ ದಿಶಾ ನಿರ್ದೇಶನ ನೀಡಿ ಮಾತನಾಡಿದ ಅವರು, "ಸ್ವಯಂ ಉದ್ಯೋಗ ಆರಂಭಿಸಬೇಕಾದರೆ ಛಲ, ತಾಳ್ಮೆ ಬೇಕು. ಸಣ್ಣ ಬಂಡವಾಳದಿಂದ ಉದ್ಯಮ ಆರಂಭಿಸಿದವರೂ ಇಂದು ನೂರಾರು ಕೋಟಿ ರೂ.ಗಳ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಶ್ರದ್ಧೆಯಿಂದ ದುಡಿಯುವ ಅದಮ್ಯ ಛಲ ಇದ್ದಲ್ಲಿ ಯಶಸ್ಸು ಒಲಿಯುತ್ತದೆ. ವಿಆರ್ಎಲ್ ಉದ್ಯಮ ದೇಶದ ಎಲ್ಲ ರಾಜ್ಯಗಳಲ್ಲೂ ವ್ಯಾಪಿಸಿಕೊಂಡಿದೆ. ಆದರೆ, ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶ್ರಮ ಸಂಸ್ಕೃತಿ ಹೆಚ್ಚಬೇಕಿದೆ. ಇದಕ್ಕೆ ಯುವಜನರು ಜಾಡ್ಯ ತೊರೆದು ಕ್ರಿಯಾಶೀಲರಾಗಬೇಕು, ಹೊಸ ಚಿಂತನೆಗಳತ್ತ ಹೊರಳಬೇಕು" ಎಂದು ಕರೆ ನೀಡಿದರು.
"ಸಾಂಪ್ರದಾಯಿಕ ಕುಲಕಸುಬುಗಳು ಅಳಿವಿನಂಚಿನಲ್ಲಿವೆ ಎಂಬುದು ವಾಸ್ತವ. ಆದರೆ, ಸಾಂಪ್ರದಾಯಿಕ ಕಸುಬುಗಳಿಗೆ ತಂತ್ರಜ್ಞಾನದ ಸ್ಪರ್ಶ ನೀಡಿದರೆ ಈಗಿನ ಕಾಲದ ಅಗತ್ಯವನ್ನು ಪೂರೈಸಬಲ್ಲವು. ಎಷ್ಟೋ ಮಹಿಳೆಯರು ಆಹಾರ ಉತ್ಪನ್ನಗಳನ್ನು ತಯಾರಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ. ಆದರೆ, ಅವರು ಮಾರ್ಕೆಟಿಂಗ್ನಲ್ಲಿ ವಿಫಲರಾಗುತ್ತಿದ್ದು, ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಿ, ವಿಸ್ತಾರವಾದ ಮಾರುಕಟ್ಟೆ ಪಡೆದುಕೊಳ್ಳಬಹುದು" ಎಂದರು.
"ಉದ್ಯಮ ರಂಗದಲ್ಲಿ ಅವಕಾಶಗಳಿಗೆ ಕೊರತೆ ಇಲ್ಲ. ಅದನ್ನು ಸರಿಯಾಗಿ ಗುರುತಿಸಿ, ಸ್ವಯಂ ಉದ್ಯೋಗ ಆರಂಭಿಸಬೇಕು. ಆರಂಭದಲ್ಲಿ ವಿರೋಧ, ಅವಮಾನ ಸಹಿಸಲು ಸಿದ್ಧರಾಗಿರಬೇಕು. ನಾನು ಆರಂಭದಲ್ಲಿ ಸಾಲ ಮಾಡಿ ಲಾರಿ ಕೊಂಡುಕೊಂಡಾಗ ವಿರೋಧ, ಹೀಯಾಳಿಕೆಯ ಮಾತುಗಳನ್ನು ಎದುರಿಸಿದ್ದೆ. ಹಾಗಂತ, ಗುರಿಯಿಂದ ವಿಚಲಿತರಾಗಬಾರದು. ದೃಢನಿಶ್ಚಯದಿಂದ ಸೂಕ್ತ ಯೋಜನೆ ಮುಖಾಂತರ ಮುಂದೆ ಸಾಗಬೇಕು. ಮುಖ್ಯವಾಗಿ, ನಾವು ಮಾಡುವ ಉದ್ಯಮ ಅಥವಾ ಯಾವುದೇ ಕೆಲಸದ ಬಗ್ಗೆ ಗೌರವ ಇರಬೇಕು. ಎಷ್ಟೋ ಜನ ತಮ್ಮ ಉದ್ಯಮದ ಬಗ್ಗೆಯೇ ಅಸಡ್ಡೆ ಭಾವನೆ ಹೊಂದಿರುತ್ತಾರೆ. ಇದು ಸರಿಯಲ್ಲ" ಎಂದರು.
"ವಿಶ್ವಗುರು ಬಸವಣ್ಣ ಕಲ್ಯಾಣ ಕರ್ನಾಟಕ ಭಾಗದಿಂದಲೇ ಕಾಯಕದ ಸಂದೇಶ ನೀಡಿದರು. ಅವರ ಚಿಂತನೆಗಳು ಅನುಷ್ಠಾನಗೊಳ್ಳಬೇಕು. ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ವಯಂ ಉದ್ಯೋಗದ ಪ್ರವೃತ್ತಿ ಹೆಚ್ಚಲಿ. ಆ ಮೂಲಕ ದುಡಿಮೆಯ ಶ್ರಮ ಸಂಸ್ಕೃತಿ ಮತ್ತೆ ವಿಜೃಂಭಿಸಲಿ. ಸ್ವದೇಶಿ ಚಿಂತನೆಗಳ ಅನುಷ್ಠಾನಕ್ಕಾಗಿ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿರುವ ಬಸವರಾಜ್ ಪಾಟೀಲ್ ಸೇಡಂ ಅವರು ಈ ಭಾರತೀಯ ಸಂಸ್ಕೃತಿ ಉತ್ಸವದ ಆಯೋಜನೆ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ. ಇದು ಬದಲಾವಣೆಯ ಪಥವನ್ನು ಸೃಷ್ಟಿಸಲಿ" ಎಂದು ಡಾ. ವಿಜಯ ಸಂಕೇಶ್ವರ ಆಶಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, "ಇಂದು ಸ್ವಯಂ ಉದ್ಯೋಗ ಮಹಿಳೆಯರಿಗೆ ಅನಿವಾರ್ಯವಾಗುತ್ತಿದೆ. ಮಾತ್ರವಲ್ಲ, ಅವರಿಗೆ ಸ್ವಾವಲಂಬನೆಯ, ಗೌರವದ ಬದುಕು ಒದಗಿಸಿಕೊಡುತ್ತದೆ. ಬಡತನದ ವಿರುದ್ಧ ಹೋರಾಡಲು ಇದು ಪ್ರಬಲ ಅಸ್ತ್ರ ಕೂಡ. ಕೇಂದ್ರ ಸರ್ಕಾರ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಜನರು ಇದರ ಸದುಪಯೋಗ ಪಡೆಯಬೇಕು ಎಂದರು. ಶೈಕ್ಷಣಿಕ ಚಿಂತಕಿ ಲೀಲಾ ಮಲ್ಲಿಕಾರ್ಜುನ ಕಾರಟಗಿ, ಉದ್ಯಮಿ ಧನರಾಜ್ ತಾಳಂಪಳ್ಳಿ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಬಸವರಾಜ್ ಪಾಟೀಲ್ ಸೇಡಂ ಇದ್ದರು.
ಪ್ರಬಲ ಇಚ್ಛಾಶಕ್ತಿಯೊಂದಿಗೆ ಉದ್ಯಮ ಆರಂಭಿಸಿ, ಮಾಡುವ ಕೆಲಸವನ್ನು ಗೌರವಿಸಿ, ಪ್ರೀತಿಸಿ. ಎದುರಾಳಿಗಳು ದೊಡ್ಡವರಾಗಿದ್ದರೂ, ಸ್ಪರ್ಧೆ ತೀವ್ರವಾಗಿದ್ದರೂ ಎದೆಗುಂದಬೇಡಿ. ಕನ್ನಡ ಪತ್ರಿಕಾ ರಂಗದಲ್ಲಿ ನಾವು ಇಂಥ ಸ್ಪರ್ಧೆಯನ್ನು ಯಶಸ್ವಿಯಾಗಿ ಎದುರಿಸಿದ್ದರಿಂದಲೇ ಕನ್ನಡಿಗರಿಗೆ ಯೋಗ್ಯ ದರದಲ್ಲಿ ಪತ್ರಿಕೆ ಓದಲು ಸಿಗುತ್ತಿದೆ. ವಿಶ್ವ ಮಾರುಕಟ್ಟೆಯತ್ತ ಗಮನವಿರಲಿ, ಆಧುನಿಕ ತಂತ್ರಜ್ಞಾನದ ಸ್ಪರ್ಶ ಅಗತ್ಯ ಉದ್ಯಮ ಆರಂಭಿಸಲು ಭಾರಿ ಮೊತ್ತದ ಬಂಡವಾಳ ಬೇಕು ಅಂತೇನಿಲ್ಲ, ಸಣ್ಣ ಮೊತ್ತದಲ್ಲೂ ಸ್ವಯಂ ಉದ್ಯೋಗ ಶುರು ಮಾಡಬಹುದು.
ಸ್ವಯಂ ಉದ್ಯೋಗದ ಮೂಲಕ ನಮ್ಮ ಬದುಕು ಸ್ವಾವಲಂಬಿ ಆಗುವುದಲ್ಲದೆ, ಇತರರ ಬಾಳಿಗೆ ಆಸರೆಯಾಗಬಹುದು. ಯುವಸಮೂಹ ನವೋದ್ಯಮಗಳನ್ನು ಆರಂಭಿಸಲಿ. ಹಾಗೆಯೇ, ನಮ್ಮ ಸಾಂಪ್ರದಾಯಿಕ ಕುಲಕಸುಬುಗಳ ರಕ್ಷಣೆಗೂ ಶ್ರಮಿಸಲಿ ಎಂಬ ಗಟ್ಟಿ ಸಂದೇಶವನ್ನು ಸ್ವಯಂ ಉದ್ಯೋಗ ಸಮಾವೇಶ ನೀಡಿತು. ವರ್ಷದಲ್ಲಿ 1 ಕೋಟಿ ಪದವೀಧರ ಹಾಗೂ ಸ್ನಾತಕೋತ್ತರ ಪದವೀಧರರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಈ ಪೈಕಿ ಕೆಲಸ ಸಿಗುವುದು 10ರಿಂದ 20 ಲಕ್ಷ ಜನರಿಗೆ. ಉಳಿದ ಯುವಕರು ಕೆಲಸ ಬೇಡುವ ಕೈಗಳಾಗದೆ, ಕೆಲಸ ನೀಡುವ ಕೈಗಳಾಗಬೇಕು. ಆ ಮೂಲಕ ಸಮಾಜದ ಚೈತನ್ಯ ಹೆಚ್ಚಿಸಬೇಕು ಎಂಬ ಸಂದೇಶವನ್ನು ವಿವಿಧ ತಜ್ಞರು ನೀಡಿದರು.