13 ಸಿಕ್ಸರ್​, 135 ರನ್​: ಕೊನೆಯ ಟಿ20 ಪಂದ್ಯದಲ್ಲಿ ಅಭಿಷೇಕ್​ ಶರ್ಮ ಬರೆದ ದಾಖಲೆ ಒಂದೆರೆಡಲ್ಲ! ಇಲ್ಲಿದೆ ವಿವರ | Abhishek Sharma

ವಿಜಯವಾಣಿ - 2025-02-03T090857.250
Published on

Abhishek Sharma: ನಿನ್ನೆ (ಫೆ.02) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಕೊನೆಯ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಮಾಡಿದ ಮೋಡಿ, ದಾಖಲಿಸಿದ ಶತಕಕ್ಕೆ ಇದೀಗ ಇಡೀ ಭಾರತವೇ ಅವರನ್ನು ಕೊಂಡಾಡುತ್ತಿದೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಭಾರತೀಯ ಆಟಗಾರನೊಬ್ಬ ಅತೀ ಹೆಚ್ಚು ರನ್​ ದಾಖಲಿಸುವ ಮೂಲಕ ತನ್ನದೇ ಹೊಸ ದಾಖಲೆಯನ್ನು ಬರೆದಿರುವುದು ಸದ್ಯ ಕ್ರಿಕೆಟ್​ ಪ್ರಿಯರ ಗುಣಗಾನಕ್ಕೆ ಕಾರಣವಾಗಿದೆ.

ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಭಿಷೇಕ್ ಶರ್ಮ, ಈ ಮೂಲಕ ಟಿ20 ಫಾರ್ಮೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದನೇ ಪಂದ್ಯದಲ್ಲಿ ಅಭಿಷೇಕ್ (135 ರನ್​, 54 ಎಸೆತಗಳಲ್ಲಿ 7 ಬೌಂಡರಿಗಳು, 13 ಸಿಕ್ಸರ್‌ಗಳು) ಬಾರಿಸಿದರು. ಶತಕ ಮೀರಿ 135 ರನ್ ದಾಖಲಿಸಿದ ಅಭಿಷೇಕ್, ಶುಭಮನ್ ಗಿಲ್ ಅವರ 126 ರನ್​ ದಾಖಲೆಯನ್ನು ಮುರಿದಿದ್ದಾರೆ. 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗಿಲ್ 126 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದರು. ಇವರಿಬ್ಬರ ನಂತರ ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಪಟ್ಟಿಯಲ್ಲಿದ್ದಾರೆ ಎಂಬುದು ಗಮನಾರ್ಹ.

1. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರು

1. ಅಭಿಷೇಕ್ ಶರ್ಮ- 135 ರನ್‌, ಇಂಗ್ಲೆಂಡ್ ವಿರುದ್ಧ (2025)

2. ಶುಬ್‌ಮನ್ ಗಿಲ್- 126 ಅಜೇಯ, ನ್ಯೂಜಿಲೆಂಡ್ ವಿರುದ್ಧ (2023)

3. ರುತುರಾಜ್ ಗಾಯಕ್ವಾಡ್- 123 ಅಜೇಯ, ಆಸ್ಟ್ರೇಲಿಯಾ ವಿರುದ್ಧ (2023)

4. ವಿರಾಟ್ ಕೊಹ್ಲಿ- 122 ಅಜೇಯ, ಅಫ್ಘಾನಿಸ್ತಾನ ವಿರುದ್ಧ (2022)

5. ರೋಹಿತ್ ಶರ್ಮ- 121 ಅಜೇಯ, ಅಫ್ಘಾನಿಸ್ತಾನ ವಿರುದ್ಧ (2024)

2. ಸಿಕ್ಸರ್​ಗಳ 'ಅಭಿಷೇಕ'

ಕೇವಲ ಇದೊಂದು ಪಂದ್ಯದಲ್ಲಿ ಅಭಿಷೇಕ್ ಶರ್ಮ ಸಿಡಿಸಿದ್ದು ಬರೋಬ್ಬರಿ 13 ಸಿಕ್ಸರ್‌. ಈ ಮೂಲಕ, ಶರ್ಮ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನ ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ 2017ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 10 ಸಿಕ್ಸರ್‌ಗಳನ್ನು ಬಾರಿಸಿದ್ದ 'ಹಿಟ್​ಮ್ಯಾನ್​' ರೋಹಿತ್ ಶರ್ಮರ ದಾಖಲೆಯನ್ನು ಇದೀಗ ಅಭಿಷೇಕ್ 13 ಸಿಕ್ಸರ್​ ಮೂಲಕ ಮುರಿದು, ತಮ್ಮ ಹೆಸರನ್ನು ಈ ಪಟ್ಟಿಯಲ್ಲಿ ಮೊದಲಿಗಿರಿಸಿದ್ದಾರೆ. ಇವರಿಬ್ಬರ ನಂತರ, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಈ ಪಟ್ಟಿಯಲ್ಲಿದ್ದಾರೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಟೀಮ್ ಇಂಡಿಯಾ ಬ್ಯಾಟರ್ಸ್​

1. ಅಭಿಷೇಕ್ ಶರ್ಮ- 13 ಸಿಕ್ಸರ್‌, ಇಂಗ್ಲೆಂಡ್ ವಿರುದ್ಧ (2025)

2. ರೋಹಿತ್ ಶರ್ಮ- 10 ಸಿಕ್ಸರ್‌, ಶ್ರೀಲಂಕಾ ವಿರುದ್ಧ (2017)

3. ಸಂಜು ಸ್ಯಾಮ್ಸನ್- 10 ಸಿಕ್ಸರ್‌, ದಕ್ಷಿಣ ಆಫ್ರಿಕಾ ವಿರುದ್ಧ (2024)

4. ತಿಲಕ್ ಶರ್ಮ- 10 ಸಿಕ್ಸರ್‌, ದಕ್ಷಿಣ ಆಫ್ರಿಕಾ ವಿರುದ್ಧ (2024)

3. 2ನೇ ಅತಿ ವೇಗದ ಶತಕ ದಾಖಲೆ

ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಇದನ್ನು ಗಮನಿಸಿ ನೋಡುವುದಾದರೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ಈಗ ಅಭಿಷೇಕ್ ಮುಡಿಗೇರಿದೆ. ಕೇವಲ 35 ಎಸೆತಗಳಲ್ಲಿ ಸೆಂಚುರಿ ಬಾರಿಸುವ ಮೂಲಕ ರೋಹಿತ್ ಶರ್ಮ ಇಂದಿಗೂ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ಆಟಗಾರರು ಇವರೇ

1.ರೋಹಿತ್ ಶರ್ಮ- 35 ಎಸೆತ, ಶ್ರೀಲಂಕಾ ವಿರುದ್ಧ (2017)

2. ಅಭಿಷೇಕ್ ಶರ್ಮ- 37 ಎಸೆತ, ಇಂಗ್ಲೆಂಡ್ ವಿರುದ್ಧ (2025)

3. ಸಂಜು ಸ್ಯಾಮ್ಸನ್- 40 ಎಸೆತ, ಬಾಂಗ್ಲಾದೇಶ ವಿರುದ್ಧ (2024)

ಒಟ್ಟಾರೆಯಾಗಿ ಈ ಸಾಧನೆಗೈದ ಆಟಗಾರರ ಪಟ್ಟಿಯಲ್ಲಿ ಅಭಿಷೇಕ್ ಶರ್ಮ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರ ಡೇವಿಡ್ ಮಿಲ್ಲರ್ ಮತ್ತು ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿದಿದ್ದಾರೆ.

ಅಂತರರಾಷ್ಟ್ರೀಯ ಟಿ20ಯಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ಆಟಗಾರರ ಪಟ್ಟಿ

1. ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) - 35 ಎಸೆತ, ಬಾಂಗ್ಲಾದೇಶ ವಿರುದ್ಧ (2017)

2. ರೋಹಿತ್ ಶರ್ಮ(ಭಾರತ)- 35 ಎಸೆತ, ಶ್ರೀಲಂಕಾ ವಿರುದ್ಧ (2017)

3. ಅಭಿಷೇಕ್ ಶರ್ಮ (ಭಾರತ)- 37 ಎಸೆತ, ಇಂಗ್ಲೆಂಡ್ ವಿರುದ್ಧ (2025)

4. ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್)- 39 ಎಸೆತ, ದಕ್ಷಿಣ ಆಫ್ರಿಕಾ ವಿರುದ್ಧ (2023)

5. ಸಂಜು ಸ್ಯಾಮ್ಸನ್ (ಭಾರತ)- 40 ಎಸೆತ, ಬಾಂಗ್ಲಾದೇಶ ವಿರುದ್ಧ (2024)

4-1 ಅಂತರದಲ್ಲಿ ಸರಣಿ ಗೆಲುವು

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ವಿರುದ್ಧದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿತು. ಈ ಮ್ಯಾಚ್ ಗೆಲುವಿನ ಮೂಲಕ 4-1 ಅಂತರದಲ್ಲಿ ಟಿ20 ಸರಣಿಯನ್ನು ಟೀಮ್ ಇಂಡಿಯಾ ಗೆದ್ದು ಬೀಗಿತು. ಇದೀಗ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗೆ ಮುಖ ಮಾಡಿರುವ ಭಾರತ, ಅಲ್ಲಿಯೂ ಆಂಗ್ಲರನ್ನು ಬಗ್ಗುಬಡಿಯಲು ಎದುರುನೋಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net