ಇಂಗ್ಲೆಂಡ್ ವಿರುದ್ಧ ಸಿಕ್ಸರ್​ಗಳ 'ಅಭಿಷೇಕ'! ದಿಗ್ಗಜನ ದಾಖಲೆ ಮುರಿದು ಗುರುಗಳ ಕೀರ್ತಿ ಹೆಚ್ಚಿಸಿದ ಶತಕ ವೀರ | Abhishek Sharma

ವಿಜಯವಾಣಿ - 2025-02-03T070807.064
Published on

Abhishek Sharma: ನಿನ್ನೆ (ಫೆ.02) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ವಿರುದ್ಧದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿತು. ಈ ಮ್ಯಾಚ್ ಗೆಲುವಿನ ಮೂಲಕ 4-1 ಅಂತರದಲ್ಲಿ ಟಿ20 ಸರಣಿಯನ್ನು ಟೀಮ್ ಇಂಡಿಯಾ ಗೆದ್ದು ಬೀಗಿತು. ಸರಣಿ ಗೆಲುವಿನ ಖುಷಿ ಒಂದೆಡೆಯಾದರೆ, ಮೈದಾನದಲ್ಲಿ ಯುವ ಬ್ಯಾಟರ್​ ಅಭಿಷೇಕ್​ ಶರ್ಮ ಮಾಡಿದ ಮೋಡಿಗೆ ಕ್ರಿಕೆಟ್ ಪ್ರಿಯರು ಅಕ್ಷರಶಃ ಬೆರಗಾಗಿದ್ದಾರೆ.

ಸಿಕ್ಸರ್​ಗಳ 'ಅಭಿಷೇಕ'

ಆರಂಭಿಕ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ (135 ರನ್, 54 ಎಸೆತ, 7 ಬೌಂಡರಿ, 13 ಸಿಕ್ಸರ್ ಹಾಗೂ 3ಕ್ಕೆ 2 ವಿಕೆಟ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೌಂಡರಿ-ಸಿಕ್ಸರ್‌ಗಳ ಮಳೆ ಹರಿಸಿದ ಭಾರತ ತಂಡ ಐದನೇ ಹಾಗೂ ಅಂತಿಮ ಟಿ20ಯಲ್ಲಿ ಇಂಗ್ಲೆಂಡ್ ಎದುರು 150 ರನ್‌ಗಳ ಬೃಹತ್ ಗೆಲುವು ದಾಖಲಿಸಿತು. ಇದರೊಂದಿಗೆ ಸೂರ್ಯಕುಮಾರ್ ಪಡೆ 4-1ರಿಂದ ಐದು ಪಂದ್ಯಗಳ ಸರಣಿ ಕೈವಶಮಾಡಿಕೊಂಡಿದ್ದು ಸದ್ಯ ಕ್ರಿಕೆಟ್​ ಪ್ರೇಮಿಗಳ ಭಾರೀ ಖುಷಿಗೆ ಕಾರಣವಾಗಿದೆ. ಮೈದಾನದಲ್ಲಿ ಇಂಗ್ಲೆಂಡ್​ ಬೌಲರ್​ಗಳಿಗೆ ಕೆಟ್ಟ ಕನಸಾಗಿ ಕಾಡಿದ ಅಭಿಷೇಕ್​ ಶರ್ಮ, ಕೇವಲ 54 ಎಸೆತದಲ್ಲಿ 135 ರನ್​ ದಾಖಲಿಸುವುದರ ಜತೆಗೆ ಸಿಕ್ಸರ್​ಗಳ ಅಬ್ಬರ ನಡೆಸಿದ್ದು ನೋಡುಗರ ಉತ್ಸಾಹವನ್ನು ಮತ್ತಷ್ಟು ಕೆರಳಿಸಿತು.

'ಸಿಕ್ಸರ್'​ ದಾಖಲೆ

ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಅತೀ ಹೆಚ್ಚು ರನ್​ ಗಳಿಸಿದ ಭಾರತದ ಯುವ ಬ್ಯಾಟರ್​ ಎಂಬ ದಾಖಲೆಗೆ ಅಣಿಯಾದ ಅಭಿಷೇಕ್ ಶರ್ಮ, ಇದರ ಜತೆಗೆ ವಾಂಖೆಡೆ ಕ್ರೀಡಾಂಗಣದಲ್ಲಿ 10ಕ್ಕೂ ಹೆಚ್ಚು ಸಿಕ್ಸರ್​ಗಳನ್ನು ಬಾರಿಸುವ ಮೂಲಕ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮರ ದಾಖಲೆಯನ್ನು ಮುರಿದು, ತಮ್ಮದೇ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ. ಇನ್ನೂ ತನ್ನ ಗುರುಗಳಾದ ಟೀಮ್ ಇಂಡಿಯಾದ ಮಾಜಿ ಆಟಗಾರ, 2011ರ ವಿಶ್ವಕಪ್​ ಹೀರೋ ಯುವರಾಜ್ ಸಿಂಗ್​ ಅವರಿಗೆ ಶತಕ ಅರ್ಪಿಸಿದ ಅಭಿಷೇಕ್​, ತನ್ನ ಅದ್ಭುತ ಸಾಧನೆ ಮೂಲಕ ಗುರುಗಳ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಕ್ರಿಕೆಟ್​ ಲೋಕದಲ್ಲಿ ದಾಖಲೆಗಳನ್ನು ನಿರ್ಮಿಸಿದ ಯುವ ಆಲ್​ರೌಂಡರ್​ ಅಭಿಷೇಕ್ ಶರ್ಮ, ಭಾರತದ ಭವಿಷ್ಯ ಕ್ರಿಕೆಟಿಗ ಎಂಬುದರಲ್ಲಿ ಅನುಮಾನವೇ ಇಲ್ಲ ಎಂಬ ಭರವಸೆಯ ಮಾತುಗಳು ಸದ್ಯ ಕ್ರಿಕೆಟ್​ ಪ್ರಿಯರಿಂದ ಹಾಗೂ ಮಾಜಿ ಕ್ರಿಕೆಟಿಗರಿಂದ ವ್ಯಾಪಕವಾಗಿ ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net