ಗ್ರಾಮ ಒನ್‌ಗಳಲ್ಲಿ ಆಧಾರ್ ಕೇಂದ್ರ ತೆರೆಯಿರಿ

skp byv (2)
ಶಿಕಾರಿಪುರದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಆಧಾರ್ ಕಾರ್ಡ್ ಸಮಸ್ಯೆ ಬಗ್ಗೆ ಅಂಚೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಕೆ.ಎಸ್.ಗುರುಮೂರ್ತಿ, ಸುಧೀರ್, ಹನುಮಂತಪ್ಪ, ಮಲ್ಲೇಶ್ ಪೂಜಾರ್ ಇತರರಿದ್ದರು.
Published on

ಶಿಕಾರಿಪುರ: ಹೋಬಳಿ ಕೇಂದ್ರಗಳ ಗ್ರಾಮ ಒನ್‌ಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ತೆರೆಯಬೇಕು. ಯಾವ ಕಾರಣಕ್ಕೂ ನಿರ್ಲಕ್ಷೃ ಮಾಡಬಾರದು ಎಂದು ಶಾಸಕ ಬಿ.ವೈ.ವಿಜಯೇಂದ್ರ ಸೂಚಿಸಿದರು.

ಆಧಾರ್ ಕಾರ್ಡ್ ಸಮಸ್ಯೆ ಕುರಿತು ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜನರ ಸಹನೆ ಪರೀಕ್ಷಿಸುವ ಕೆಲಸ ಮಾಡಬೇಡಿ. ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದವರಿಗೆ ನೆಪ ಹೇಳುವುದನ್ನು ಬಿಟ್ಟು ಸಮಸ್ಯೆಗೆ ಮೊದಲು ಪರಿಹಾರ ಕಂಡುಹಿಡಿಯಿರಿ ಎಂದು ತಿಳಿಸಿದರು.

ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಮಾಡಿಸುವ ಸಮಸ್ಯೆ ತಾಲೂಕಿನಲ್ಲಿ ಹೆಚ್ಚಾಗುತ್ತಿದೆ. ಶಿಕಾರಿಪುರದಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳು ಎರಡೇ ಇರುವುದರಿಂದ ಜನರಿಗೆ ತೊಂದರೆಗಳಾಗಿವೆ. ತಕ್ಷಣ ಈ ಸಮಸ್ಯೆ ಬಗೆಹರಿಸಬೇಕು. ಯಾವ ಇಲಾಖೆಯ ಕೆಲಸಕ್ಕೆ ಹೋದರೂ, ವಿವಿಧ ಯೋಜನೆಯ ಸೌಲಭ್ಯಗಳು ರೈತರಿಗೆ, ಜನಸಾಮಾನ್ಯರಿಗೆ ತಲುಪಲು ಆಧಾರ್ ಕಾರ್ಡ್ ಅತ್ಯಗತ್ಯ ಎಂದರು.

ಸರ್ವರ್ ಇಲ್ಲ, ಸಿಸ್ಟಂ ಸರಿಯಿಲ್ಲ ಎಂದು ಹೇಳುವುದು, ಟೋಕನ್ ಕೊಟ್ಟವರನ್ನೂ ವಾಪಸ್ ಕಳುಹಿಸುವುದು ಸರಿಯಲ್ಲ. ಜನರು ದೈನಂದಿನ ಕೆಲಸಗಳನ್ನು ಬಿಟ್ಟು ಬಂದಿರುತ್ತಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಅವರ ಜತೆಗೂ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ. ತಹಸೀಲ್ದಾರ್ ಕೂಡ ನಮ್ಮ ಜತೆಗಿದ್ದಾರೆ. ಜಿಲ್ಲಾಧಿಕಾರಿ ಸಲಹೆ ಮೇರೆಗೆ ತಹಸೀಲ್ದಾರ್ ಈ ಸಮಸ್ಯೆಗೆ ಪೂರ್ಣ ವಿರಾಮ ಹಾಕಬೇಕು. ಶಾಲಾ ಕಾಲೇಜು ಮಕ್ಕಳಿಗೆ ಹೊಸ ಆಧಾರ್ ಕಾರ್ಡ್ ಅಥವಾ ತಿದ್ದುಪಡಿಗಳ ಅಗತ್ಯವಿರುತ್ತದೆ. ಹಾಗಾಗಿ ಸಂಬಂಧಿಸಿದವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ತಿಳಿಸಿದರು.

ಶಿಕಾರಿಪುರದಲ್ಲಿ ಅಂಚೆ ಕಚೇರಿ ಮತ್ತು ಎಸ್‌ಬಿಐನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ, ಹೊಸ ಆಧಾರ್ ಕಾರ್ಡ್‌ಗಾಗಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಸಿಬ್ಬಂದಿ ಇಲ್ಲದ ಕಾರಣ ಸಮಸ್ಯೆ ಉಂಟಾಗಿದೆ. ಈಗ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ತಾಳಗುಂದ, ಶಿರಾಳಕೊಪ್ಪ ಮತ್ತು ಹೊಸೂರು ನಾಡಕಚೇರಿಗಳಲ್ಲಿ ವ್ಯವಸ್ಥೆ ಮಾಡುತ್ತಿದ್ದೇವೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಲು ಹನ್ನೊಂದು ಕಡೆಗಳಲ್ಲಿ ವ್ಯವಸ್ಥೆ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ತಿಳಿಸಿದರು. ನಮ್ಮಲ್ಲಿ ಪ್ರತಿದಿನ 20 ಟೋಕನ್ ಮಾತ್ರ ಕೊಡುತ್ತಿದ್ದೇವೆ. ಸಿಬ್ಬಂದಿ ಕೊರತೆಯಿದೆ ಮತ್ತು ಸಿಸ್ಟಂ ಹಳೆಯವು. ನೆಟ್‌ವರ್ಕ್ ಸಮಸ್ಯೆಯಿಂದ ಹೆಚ್ಚಿನ ಟೋಕನ್‌ಗಳನ್ನು ನೀಡಲು ಆಗುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆಯಿಂದ ಟೋಕನ್ ಪಡೆದವರನ್ನು ವಾಪಸ್ ಕಳುಹಿಸಲಾಗಿದೆ ಎಂದು ಪೋಸ್ಟ್ ಮಾಸ್ಟರ್ ಶಿವಕುಮಾರ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net