ಪಾಕ್​ನಲ್ಲಿ ದೈಹಿಕ ಅಂತರಕ್ಕೆ ಡೋಂಟ್ ಕೇರ್!: ಕರೊನಾ ವೈರಸ್ ಪ್ರಕರಣ ಸಂಖ್ಯೆ ಭಾರಿ ಏರಿಕೆ

pack corona
Published on

ನವದೆಹಲಿ: ಕರೊನಾ ವೈರಾಣು ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದರೂ ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯದಲ್ಲೇ ಮಸೀದಿಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಈಗಲೂ ಸಾರ್ವಜನಿಕ ನಮಾಜ್ ಕಾರ್ಯಕ್ರಮಗಳು ಮುಕ್ತವಾಗಿ ನಡೆಯುತ್ತಿವೆ. ಹಲವು ಕಡೆ ದೈಹಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮಗಳನ್ನು ಗಾಳಿಗೆ ತೂರಲಾಗಿರುವ ಮಧ್ಯೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಪಾಕ್​ನಲ್ಲಿ ಸಾಮಾಜಿಕ ಹಾಗೂ ರಾಜಕೀಯವಾಗಿ ಧರ್ಮ ಮಹತ್ವದ ಪಾತ್ರವಹಿಸುವುದರಿಂದ ಧಾರ್ವಿುಕ ಮುಖಂಡರ ಆಶಯಕ್ಕೆ ಪೂರಕವಾಗಿಯೇ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಮಸೀದಿಗಳಲ್ಲಿ ಧಾರ್ವಿುಕ ಚಟುವಟಿಕೆಗಳಿಗೆ ಅವಕಾಶ ನೀಡಿದೆ.

ಅದಾಗಲೇ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಪಾಕಿಸ್ತಾನ ಮತ್ತು ಸರ್ಕಾರ ಲಾಕ್​ಡೌನ್ ಘೊಷಣೆಗೆ ಮನಸ್ಸು ಮಾಡಿರಲಿಲ್ಲ. ಹೀಗಾಗಿ, ನೆಪ ಮಾತ್ರದ ಲಾಕ್​ಡೌನ್ ಘೊಷಿಸಲಾಗಿತ್ತು ಮತ್ತು ಇದರಲ್ಲಿ ಮಸೀದಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಣಯವೂ ಇತ್ತು. ಆದರೆ, ಏಪ್ರಿಲ್ 14ರಂದು ಧಾರ್ವಿುಕ ಮುಖಂಡರ ಗುಂಪು, ನಾವು ಮಸೀದಿಗಳನ್ನು ತೆರೆಯಲು ಸರ್ಕಾರದ ಅನುಮತಿಗಾಗಿ ಕಾಯುವುದಿಲ್ಲ. ತಕ್ಷಣವೇ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ಶುರುವಾಗಲಿವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇದರಿಂದ ಕಸಿವಿಸಿಗೊಂಡಿದ್ದ ಇಮ್ರಾನ್ ಖಾನ್, ಧಾರ್ವಿುಕ ಮುಖಂಡರೊಂದಿಗೆ ಮಾತುಕತೆ ನಡೆಸಿ, ಷರತ್ತುಬದ್ಧ ಅನುಮತಿ ನೀಡಿದರು. ಇದಕ್ಕೆ ವೈದ್ಯ ವೃಂದದಿಂದ ವ್ಯಾಪಕ ವಿರೋಧ ವ್ಯಕ್ತವಾದರೂ, ಸರ್ಕಾರಕ್ಕೆ ಈ ಕ್ರಮ ಅನಿವಾರ್ಯವಾಗಿತ್ತು. ಭಾರತದ ರಾಜಧಾನಿ ದೆಹಲಿಯ ನಿಜಾಮುದ್ದಿನ್ ಮರ್ಕಜ್​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಭೆ ಕರೊನಾ ವೈರಾಣು ವ್ಯಾಪಕ ಹರಡುವಿಕೆಗೆ ಕಾರಣವಾಗಿತ್ತೋ ಹಾಗೆ ಪಾಕಿಸ್ತಾನದ ಲಾಹೋರ್ ನಗರದಲ್ಲೂ ಮಾರ್ಚ್ ತಿಂಗಳಲ್ಲಿ ಜಮಾತ್ ಸಭೆ ಏರ್ಪಡಿಸಲಾಗಿತ್ತು. ಇಲ್ಲೂ ಸೋಂಕಿತ ವ್ಯಕ್ತಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಶೇ.30 ಕೇಸುಗಳು ಆ ಸಭೆಯ ಪರಿಣಾಮದಿಂದಲೇ ದೇಶವ್ಯಾಪಿ ಹಬ್ಬಿದೆ ಎಂದು ವಿಶ್ಲೇಷಿಸಲಾಗಿದೆ.

ಸಂಖ್ಯೆ ಮುಚ್ಚಿಡುತ್ತಿದೆಯೇ?

ಇತರೆ ಕೆಲವು ದೇಶಗಳಂತೆ ಪಾಕಿಸ್ತಾನವೂ ಕರೊನಾ ಸೋಂಕಿತರು ಮತ್ತು ಸಾವಿಗೀಡಾದವರ ಸಂಖ್ಯೆ ಮುಚ್ಚಿಡುತ್ತಿದೆಯೇ ಎಂಬ ಅನುಮಾನವಿದೆ. ಕರೊನಾ ವ್ಯಾಪಕತೆಯಿಂದ ನಲುಗಿ ಹೋಗಿರುವ ಸರ್ಕಾರಕ್ಕೆ ಸುಸಜ್ಜಿತ ಕೋವಿಡ್-19 ನಿಯಂತ್ರಕ ಘಟಕಗಳನ್ನು ಸಿದ್ಧಪಡಿಸಲು ಸಾಧ್ಯವಾಗಿಲ್ಲ ಮತ್ತು ಸರ್ಕಾರಿ ಕೇಂದ್ರಗಳಂತೂ ಅವ್ಯವಸ್ಥಿತ ಸ್ಥಿತಿಯಲ್ಲಿದೆ. ಸಾವಿರಾರು ಮಂದಿ ತಮಗೆ ಸೋಂಕಿನ ಲಕ್ಷಣಗಳಿದ್ದರೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿಲ್ಲ. ಹೀಗಾಗಿ, ಜನರ ಮಧ್ಯೆ ವೈರಾಣು ವ್ಯಾಪಕವಾಗಿ ಹಬ್ಬುತ್ತಿದೆ. ಸರ್ಕಾರವೂ ಜಾಗತಿಕವಾಗಿ ತನ್ನ ಮುಖ ಉಳಿಸಿಕೊಳ್ಳುವ ಸಲುವಾಗಿ ಸಂಖ್ಯೆಗಳನ್ನೂ ಮುಚ್ಚಿಡುತ್ತಿದೆ ಎಂಬ ಚರ್ಚೆಗಳೂ ನಡೆದಿವೆ.

ಕರೊನಾ ಮಧ್ಯೆಯೂ ದುಷ್ಕೃತ್ಯ

ಭಾರತ ಸರ್ಕಾರ ಕರೊನಾ ವೈರಸ್ ನಿಯಂತ್ರಣದ ಮೇಲೆ ಹೆಚ್ಚಿನ ಗಮನಹರಿಸಿರುವ ಮಧ್ಯೆ ಪಾಕಿಸ್ತಾನ ಮಾತ್ರ ಭಾರತೀಯರ ವಿರುದ್ಧ ಉಗ್ರವಾದ ಪೋಷಿಸುವುದನ್ನು ಮುಂದುವರಿಸಿದೆ. ಕಳೆದ ವರ್ಷದ ಮಾರ್ಚ್ ತಿಂಗಳಿಗೆ (267 ಕದನ ವಿರಾಮ ಉಲ್ಲಂಘನೆ) ಹೋಲಿಸಿದರೆ ಈ ಬಾರಿ 411 ಬಾರಿ ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಕಾಶ್ಮೀರದ ಹಂದ್ವಾರದ ಕೆರನಾ ಸೆಕ್ಟರ್ ನಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿಸಿ ಉಗ್ರಗಾಮಿಗಳು ದಾಳಿ ನಡೆಸಿ, ಇದರಲ್ಲಿ ಐವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಇಂಥಾ ಸಂಕಟದ ಸಮಯದಲ್ಲೂ ಪಾಕ್ ಇಂಥಾ ದಾಳಿಗಳನ್ನು ಪ್ರೇರೇಪಿಸುವುದು ಅಚ್ಚರಿಯ ವಿಷಯವೇನಲ್ಲ ಎಂದು ಭಾರತೀಯ ಸೇನೆ ಪ್ರತಿಕ್ರಿಯಿಸಿತ್ತು.

60 ಸಾವಿರದತ್ತ ಕೇಸು

ಸುಮಾರು 22 ಕೋಟಿ ಜನಸಂಖ್ಯೆ ಇರುವ ಪಾಕಿಸ್ತಾನದಲ್ಲಿ ಈವರೆಗೆ 57,705 ಕರೊನಾ ಕೇಸುಗಳು ದಾಖಲಾಗಿವೆ. 1197 ಮಂದಿ ಮೃತಪಟ್ಟಿದ್ದರೆ, 18,314 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಲ್ಲಿ ಮೊದಲ ಕೇಸು ಬೆಳಕಿಗೆ ಬಂದಿದ್ದು ಫೆಬ್ರವರಿ 26ರಂದು. ಇರಾನ್ ನಿಂದ ವಾಪಸಾಗಿದ್ದ ಕರಾಚಿ ಮೂಲದ ವಿದ್ಯಾರ್ಥಿಯಲ್ಲಿ ಕರೊನಾ ಸೋಂಕುಗಳು ಕಾಣಿಸಿಕೊಂಡಿದ್ದವು. ಮಾ. 18ರ ವೇಳೆಗೆ ದೇಶದಲ್ಲಿ ಈ ವೈರಾಣು ವ್ಯಾಪಿಸಿಕೊಂಡಿತ್ತು.

ಚೀನಾದ ನೆರವು ಕೇಳಿದ ಪಾಕ್

ಆರ್ಥಿಕ ಮುಗ್ಗಟ್ಟು ಹಾಗೂ ಕರೊನಾ ತುರ್ತು ಪರಿಸ್ಥಿತಿ ಪರಿಣಾಮ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸುಮಾರು 25 ಮಿಲಿಯನ್ ಮಂದಿ ನೌಕರಿ ಒದಗಿಸಬೇಕೆಂದು ಇಮ್ರಾನ್ ಖಾನ್ ಉದ್ದೇಶಿಸಿದ್ದಾರೆ. ಈ ನಿಟ್ಟಿನಲ್ಲಿ, ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆ ಅಡಿಯಲ್ಲಿ ಜಲಾಶಯ ನಿರ್ವಣ, ವಿಮಾನ ನಿಲ್ದಾಣ, ರಸ್ತೆ ನಿರ್ಮಾಣ ಸೇರಿದಂತೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಶೀಘ್ರದಲ್ಲಿ ಆರ್ಥಿಕ ನೆರವನ್ನು ನೀಡುವಂತೆ ಚೀನಾ ಮುಂದೆ ಖಾನ್ ಕೈಯೊಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net