ಸಂಪುಟ ಪುನಾರಚನೆ ಅನುಮಾನ, ವಿಸ್ತರಣೆಗೆ ತೀರ್ಮಾನ? 3-4 ಜನರಿಗಷ್ಟೇ ಅವಕಾಶ ಸಾಧ್ಯತೆ

vidhana soudha 1
Published on

ಬೆಂಗಳೂರು: ನಿಗಮ ಮತ್ತು ಮಂಡಳಿಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ಬೆನ್ನ ಹಿಂದೆಯೇ ಸಚಿವ ಸಂಪುಟ ಆಗಸ್ಟ್ ಮೊದಲವಾರದಲ್ಲಿ ವಿಸ್ತರಣೆ ಆಗುವುದು ಬಹುತೇಕ ಖಚಿತವಾಗಿದೆ.

ವಿಧಾನಪರಿಷತ್ ನಾಮನಿರ್ದೇಶನ, ನಿಗಮಗಳಿಗೆ ಈಗಷ್ಟೇ ನೇಮಕ ಮಾಡಿ ಅರಗಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟಕ್ಕೆ ಹೊಸದಾಗಿ ಮೂರರಿಂದ ನಾಲ್ಕು ಶಾಸಕರನ್ನು ಸೇರಿಸಿಕೊಳ್ಳಲು ಸಿದ್ಧ್ದೆ ಮಾಡಿಕೊಂಡಿದ್ದಾರೆ. ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಗಳ ಪೈಕಿ ಎರಡನ್ನು ತುಂಬದಿರುವ ನಿರ್ಧಾರಕ್ಕೆ ಬಂದಿದ್ದಾರೆಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ವದಂತಿಗಳ ಕಾರುಬಾರು: ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ಅನೇಕ ಶಾಸಕರು ಹಿಂದೇಟು ಹಾಕಿರುವುದು ಮತ್ತು ಡಿಸಿಎಂ ಲಕ್ಷ್ಮಣ ಸವದಿ ಅವರ ದೆಹಲಿ ಭೇಟಿ ರಾಜ್ಯ ರಾಜಕೀಯದಲ್ಲಿ ಅನೇಕ ವದಂತಿಗೆ ಕಾರಣವಾಗಿದೆ. ನಾಯಕತ್ವವೇ ಬದಲಾಗುತ್ತದೆ ಎಂಬ ಚರ್ಚೆ ನಡೆಯುತ್ತಿವೆಯಾದರೂ ಅಂತಹ ಯಾವ ಬೆಳವಣಿಗೆಗಳು ಘಟಿಸುವುದಿಲ್ಲವೆಂಬುದು ಬಿಜೆಪಿಯ ಆಂತರಿಕ ಮೂಲಗಳ ಸ್ಪಷ್ಟ ಅಭಿಪ್ರಾಯವಾಗಿದೆ.

ಸವದಿ ಇಲಾಖೆಯ ಕೆಲಸಗಳು, ಅದರಲ್ಲೂ ಮುಖ್ಯವಾಗಿ 300 ಎಲೆಕ್ಟ್ರಿಕ್ ಬಸ್​ಗಳಿಗೆ ಕೇಂದ್ರದ ಅನುಮತಿ ಪಡೆಯುವ ಸಲುವಾಗಿ ಹೋಗಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ನಿರೀಕ್ಷೆಯಂತೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಲಿದೆ ಎಂದೇ ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆಗೆ ನಿರ್ಧರಿಸಿರುವ ಯಡಿಯೂರಪ್ಪ ಇನ್ನೂ ಹೈಕಮಾಂಡ್ ಜತೆ ಚರ್ಚೆ ನಡೆಸಿಲ್ಲ ಎನ್ನಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಚರ್ಚೆ ನಡೆಸಿ ಒಪ್ಪಿಗೆ ಪಡೆದು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇತ್ತೀಚೆಗೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಮನೆಗೆ ಔತಣಕ್ಕೆ ಹೋಗಿದ್ದು ಹಾಗೂ ಆ ಸಂದರ್ಭದಲ್ಲಿ ಸಚಿವ ಸುಧಾಕರ್ ಸಹ ಉಪಸ್ಥಿತರಿದ್ದದ್ದು ಬಿಜೆಪಿಯಲ್ಲಿನ ಬೆಳವಣಿಗೆಗಳ ಚರ್ಚೆಗೆ ತುಪ್ಪ ಸುರಿದಿರುವುದು ಸುಳ್ಳೇನು ಅಲ್ಲ. ನಾಯಕತ್ವ ಬದಲಾವಣೆಗೆ ಮುಂದಾದರೆ ಯಡಿಯೂರಪ್ಪರನ್ನು ಸರಿದೂಗಿಸುವ ಮತ್ತೊಬ್ಬ ನಾಯಕ ಬಿಜೆಪಿಯಲ್ಲಿ ಸದ್ಯಕ್ಕಂತೂ ಕಂಡು ಬರುತ್ತಿಲ್ಲ ಎಂಬುದು ವರಿಷ್ಠರಿಗೂ ಗೊತ್ತಿದೆ. ಆದ್ದರಿಂದ ಈ ಹಂತದಲ್ಲಿ ಅಂಥ ಪ್ರಯತ್ನ ಮಾಡಲಾರರು ಎಂಬುದನ್ನು ಪಕ್ಷದಲ್ಲಿ ಬಿಎಸ್​ವೈ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಕೊನೆಗೆ ಚರ್ಚೆಗಳೆಲ್ಲ ಸಂಪುಟ ವಿಸ್ತರಣೆಯಲ್ಲಿಗೆ ಬಂದು ನಿಲ್ಲುತ್ತವೆ.

ಸದ್ಯ ಪುನಾರಚನೆ ಇಲ್ಲ: ಯಡಿಯೂರಪ್ಪ ಅವರ ಆಪ್ತಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಸದ್ಯಕ್ಕೆ ಮೂರರಿಂದ ನಾಲ್ಕು ಸ್ಥಾನ ಮಾತ್ರ ಭರ್ತಿ ಮಾಡಲಿದ್ದಾರೆ. ಕಾಂಗ್ರೆಸ್​ನಿಂದ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ಎಂ.ಟಿ.ಬಿ. ನಾಗರಾಜ್, ಆರ್. ಶಂಕರ್, ಬಿಜೆಪಿಯ ಉಮೇಶ್ ಕತ್ತಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಹೈಕಮಾಂಡ್ ಅನುಮತಿ ಕೊಟ್ಟರೆ ಅರವಿಂದ ಲಿಂಬಾವಳಿಗೂ ಅವಕಾಶ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಸದ್ಯಕ್ಕೆ ಪುನಾರಚನೆಗೆ ಕೈ ಹಾಕದೇ ಡಿಸೆಂಬರ್​ನಲ್ಲಿ ಪುನಾರಚನೆ ಮಾಡಬೇಕು ಎಂಬುದು ಯಡಿಯೂರಪ್ಪ ಉದ್ದೇಶವಾಗಿದೆ. ಹೈಕಮಾಂಡ್ ಜತೆ ಮಾತುಕತೆ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಮನವೊಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪುನಾರಚನೆ ಸಂದರ್ಭದಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ್ ಅವರಿಗೆ ಅವಕಾಶ ಲಭ್ಯವಾಗಬಹುದು. ಇಬ್ಬರಿಗೂ ಈ ಸದ್ಯಕ್ಕೆ ಇಲ್ಲವೆಂದೇ ಹೇಳಲಾಗುತ್ತಿದೆ.

ಮನವೊಲಿಕೆಗೆ ನಿರ್ಧಾರ: ಸಂಪುಟ ವಿಸ್ತರಣೆಗೆ ಅಡ್ಡಿಯಾಗಿದ್ದ ಪಕ್ಷದ ಆಕಾಂಕ್ಷಿಗಳಿಗೆ ನಿಗಮಗಳಲ್ಲಿ ಅವಕಾಶ ನೀಡಲಾಗಿದೆ. ಆದರೆ ಬಹುತೇಕರು ಸಂಪುಟದ ಆಸೆ ಇಟ್ಟುಕೊಂಡು ಅಧ್ಯಕ್ಷ ಸ್ಥಾನ ನಿರಾಕರಿಸುತ್ತಿದ್ದಾರೆ. ಎಲ್ಲರನ್ನೂ ಕರೆದು ಮನವೊಲಿಸಲು ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ. ಒಂದೆರಡು ದಿನಗಳಲ್ಲಿ ಆ ಕೆಲಸ ಮಾಡಲಿದ್ದು, ಬಹುತೇಕ ಎಲ್ಲರೂ ನಿಗಮಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆಂದೇ ಹೇಳಲಾಗುತ್ತಿದೆ.

ಲಕ್ಷ್ಮಣ ಸವದಿ ದೆಹಲಿಗೆ ತೆರಳಿ ಮುಖ್ಯಮಂತ್ರಿಯಾಗಲು ಪ್ರಯತ್ನ ನಡೆಸಿದ್ದಾರೆ ಎಂಬುದೆಲ್ಲ ಕಪೋಲ ಕಲ್ಪಿತ.ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇದೆಯೆ? ಮುಖ್ಯಮಂತ್ರಿ ಹುದ್ದೆಗೆ ಪ್ರಯತ್ನ ನಡೆಸಿರುವುದಾಗಿ ಸವದಿಯವರೇನಾದರೂ ಹೇಳಿಕೆ ನೀಡಿದ್ದಾರೆಯೆ? ನಿಗಮ-ಮಂಡಳಿಗಳಿಗೆ ನೇಮಕ ಮಾಡಿದಾಗಲೂ ಕೆಲವರಿಗೆ ಬೇಸರವಾಗಿರಬಹುದು. ಅದನ್ನೆಲ್ಲ ಕುಳಿತು ರ್ಚಚಿಸುವ ಮೂಲಕ ಸರಿಪಡಿಸಲಾಗುತ್ತದೆ. | ಜಗದೀಶ ಶೆಟ್ಟರ್, ಕೈಗಾರಿಕಾ ಸಚಿವ  ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭವಿಷ್ಯದ ಮತ್ತು ರಾಜ್ಯದ ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂಬ ಅಭಿಯಾನ ನಡೆಸಿರುವುದು ನನಗಂತೂ ಗೊತ್ತಿಲ್ಲ. ಸವದಿ ಹಣೆಬರಹದಲ್ಲಿ ಮುಖ್ಯಮಂತ್ರಿ ಯೋಗ ಇದ್ದರೆ ಯಾರೂ ತಪ್ಪಿಸಲು ಆಗುವುದಿಲ್ಲ. ಅವರ ನಸೀಬದಾಗ ಸಿಎಂ ಯೋಗ ಇದ್ರೆ ಆಗಲಿ ಬಿಡಿ. | ರಮೇಶ ಜಾರಕಿಹೊಳಿ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net