

ನವದೆಹಲಿ: ಅಯೋಧ್ಯೆಯ ಶ್ರೀ ರಾಮ ಮಂದಿರದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೇರಿ 250 ಮಂದಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ.
ಅಯೋಧ್ಯೆಯಲ್ಲಿನ ಕೆಲ ಪ್ರಮುಖ ಸಂತರು, ರಾಮ ದೇವಸ್ಥಾನ ಅಭಿಯಾನದ ಭಾಗವಾಗಿದ್ದ ಹಿರಿಯ ಮುಖಂಡರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ವಿಶ್ವ ಹಿಂದು ಪರಿಷತ್ನ ಹಿರಿಯ ಪದಾಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಹಿರಿಯ ಸಚಿವರು ಮತ್ತು ಉತ್ತರ ಪ್ರದೇಶ ಸರ್ಕಾರದ ಕೆಲ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.
ಲಭ್ಯ ಮಾಹಿತಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5ರಂದು ನಡೆಯಲಿರುವ ಶ್ರೀ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 11ಗಂಟೆಗೆ ಅಯೋಧ್ಯೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಮಧ್ಯಾಹ್ನ 1.10ರವರೆಗೆ ಇರಲಿದ್ದಾರೆ ಎನ್ನಲಾಗಿದೆ.
ಭೂಮಿ ಪೂಜೆ ಕಾರ್ಯಕ್ರಮ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಕಾಶಿ ಮತ್ತು ವಾರಾಣಸಿಯ ಅರ್ಚಕರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.