

ಬೆಂಗಳೂರು: ಉತ್ತರ ಪ್ರದೇಶದ ಆಯೋಧ್ಯೆಯಿಂದ ರಾಮನ ವಿಗ್ರಹ ಬುಕ್ ಮಾಡಿದ್ದ ವೃದ್ಧ, ಪಾರ್ಸೆಲ್ ಟ್ರ್ಯಾಕ್ ಪರಿಶೀಲನೆಗೆ ಕರೆ ಮಾಡಿದಾಗ ಸೈಬರ್ ಕಳ್ಳರು 1 ಲಕ್ಷ ರೂ. ವಂಚನೆ ಮಾಡಿದ್ದಾರೆ.
ಕಲ್ಯಾಣನಗರದ ಕಮ್ಮನಹಳ್ಳಿ ಮುಖ್ಯರಸ್ತೆ ನಿವಾಸಿ 80 ವರ್ಷದ ವೃದ್ಧ ವಂಚನೆಗೆ ಒಳಗಾದವರು. ನೊಂದ ವೃದ್ಧ ಕೊಟ್ಟ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಪೂರ್ವ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 30ರಂದು ಆನ್‌ಲೈನ್ ಮೂಲದ ಆಯೋಧ್ಯೆಯಲ್ಲಿ ವೃದ್ಧ, ರಾಮನ ವಿಗ್ರಹ ಬುಕ್ ಮಾಡಿದ್ದರು. ಮೇ 1ರಂದು ಪಾರ್ಸೆಲ್ ಮಾಡುತ್ತಿರುವುದಾಗಿ ಮೊಬೈಲ್‌ಗೆ ಸಂದೇಶ ಬಂದಿತ್ತು. ಯಾವ ಸಮಯಕ್ಕೆ ಬರಲಿದೆ ಎಂದು ಟ್ರ್ಯಾಕ್ ಪರಿಶೀಲನೆ ಮಾಡುವ ಉದ್ದೇಶಕ್ಕೆ ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ ಹುಡುಕಾಟ ನಡೆಸಿದ್ದರು. ಅದರಲ್ಲಿ ಸಿಕ್ಕ ಮೊಬೈಲ್ ನಂಬರ್‌ಗೆ ವೃದ್ಧ ಕರೆ ಮಾಡಿದಾಗ ಅಜಯ್ ಎಂಬಾತ ಸ್ವೀಕರಿಸಿದ್ದ. ವೃದ್ಧನ ಕಡೆಯಿಂದ ಪಾರ್ಸೆಲ್ ಐಡಿ ಪಡೆದು ಕಸ್ಟಮರ್ ಸಪೋರ್ಟ್ ಆ್ಯಪ್‌ಡೌನ್ ಲೋಡ್ ಮಾಡಿಕೊಳ್ಳಬೇಕು.
ಆನಂತರ ಡೆಬಿಟ್ ಕಾರ್ಡ್ ಬಳಸಿ 5 ರೂ. ಶುಲ್ಕ ಪಾವತಿ ಮಾಡಿದರೆ ನಿಮ್ಮ ಪಾರ್ಸೆಲ್ ಟ್ರ್ಯಾಕ್ ಮಾಹಿತಿ ಸಿಗಲಿದೆ ಎಂದು ಹೇಳಿದ್ದ. ಇದನ್ನು ನಂಬಿದ ವೃದ್ಧ, ಅರೋಪಿ ಕಳುಹಿಸಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು 5 ರೂ. ಪಾವತಿಸಿದ್ದರು. ಇದಾದ ಮೇಲೆ ದೂರುದಾರರಿಗೆ ಸೇರಿದ ಕೆನರಾ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್‌ನಿಂದ ಹಂತ ಹಂತವಾಗಿ 1 ಲಕ್ಷ ರೂ. ಕಡಿತವಾಗಿದೆ. ನೊಂದ ವೃದ್ಧ, ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.