ಇನ್ನೂ ಸಿದ್ಧವಾಗದ ಆನ್​ಲೈನ್ ಕ್ಲಾಸ್ ವರದಿ; ಡೆಡ್​ಲೈನ್ ಮುಗಿದರೂ ಬೇಕಂತೆ ಮತ್ತಷ್ಟು ಕಾಲಾವಕಾಶ

State-3
Published on

ದೇವರಾಜ್ ಎಲ್. ಬೆಂಗಳೂರು

ಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿ ನಡೆಸುವ ಬಗ್ಗೆ ಮಾರ್ಗಸೂಚಿ ರೂಪಿಸಲು ರಚಿಸಿದ್ದ ತಜ್ಞರ ಸಮಿತಿ ಡೆಡ್​ಲೈನ್ ಮುಗಿಸಿದರೂ ಇನ್ನೂ ಸರ್ಕಾರಕ್ಕೆ ವರದಿ ಸಿದ್ಧವಾಗಿಲ್ಲ. ಇದರಿಂದಾಗಿ ಬಹುತೇಕ ಶಾಲೆಗಳು ಆನ್​ಲೈನ್​ನಲ್ಲಿ ತರಗತಿ ನಡೆಸುವುದನ್ನು ಮುಂದುವರಿಸಿಕೊಂಡೇ ಹೋಗುತ್ತಿವೆ.

ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್​ಲೈನ್ ತರಗತಿ ನಡೆಸುವ ಬಗ್ಗೆ ‘ವಿಜಯವಾಣಿ’ ಅಭಿಯಾನ ಆರಂಭಿಸಿತ್ತು. ಇದಕ್ಕೆ ರಾಜ್ಯದ ಮೂಲೆಗಳಿಂದ ಪಾಲಕರು, ಚಿಂತಕರು ಬೆಂಬಲ ವ್ಯಕ್ತಪಡಿಸಿದದ್ದರು. ಈ ಹಿನ್ನೆಲೆಯುಲ್ಲಿ 1ರಿಂದ 5ನೇ ತರಗತಿವರೆಗೆ ಆನ್​ಲೈನ್ ಶಿಕ್ಷಣ ಬ್ಯಾನ್ ಮಾಡಿದ ಶಿಕ್ಷಣ ಇಲಾಖೆ 6ರಿಂದ 10ನೇ ತರಗತಿಗೆ ಆನ್​ಲೈನ್​ನಲ್ಲಿ ತರಗತಿ ನಡೆಸಲು ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ನಿರೂಪಣಾ ಸಮಿತಿ ಸದಸ್ಯ ಡಾ.ಎಂ.ಕೆ.ಶ್ರೀಧರ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿತ್ತು. ಇತರ ಶಿಕ್ಷಣ ತಜ್ಞರಾದ ಗುರುರಾಜ ಕರಜಗಿ, ಡಾ.ಪಿ.ವಿ. ನಿರಂಜನಾರಾಧ್ಯ ಸೇರಿ ಒಟ್ಟಾರೆ 11 ಸದಸ್ಯರ ಸಮಿತಿ ಇದಾಗಿದೆ. ಸಮಿತಿಗೆ ವರದಿ ನೀಡಲು ಶಿಕ್ಷಣ ಇಲಾಖೆ 10 ದಿನಗಳ ಗಡುವು ವಿಧಿಸಿತ್ತು. ಈ ಗಡುವು ಜೂ.25ರಂದು ಅಂತ್ಯವಾಗಿದ್ದು, ಸಮಿತಿ ಇನ್ನೂ ವರದಿ ರಚಿಸುವುದರಲ್ಲೇ ಕಾಲ ಕಳೆಯುತ್ತಿದೆಯೇ ಹೊರತು ಇಲಾಖೆಗೆ ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸಿಲ್ಲ.

ಈವರೆಗೆ ಸಮಿತಿ ಕಳೆದ ಹತ್ತು ದಿನಗಳಲ್ಲಿ ಎರಡು ಸಭೆಯನ್ನು ಮಾತ್ರ ನಡೆಸಿದೆ. ಸಮಿತಿಯ ಇತರ ಸದಸ್ಯರು ವ್ಯಕ್ತಪಡಿಸಿದ ಎಲ್ಲ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಅಲ್ಲದೆ, ಕೇಂದ್ರ ಸರ್ಕಾರ ಆನ್​ಲೈನ್ ಶಿಕ್ಷಣದ ಬಗ್ಗೆ ನೀಡಿರುವ ಸೂಚನೆಗಳ ಬಗ್ಗೆಯೂ ಗಮನ ಹರಿಸುತ್ತಿದೆ. ರಾಜ್ಯದಲ್ಲಿ ಕೆಲವು ಖಾಸಗಿ ಸಂಸ್ಥೆಗಳು ನೀಡಿರುವ ಸಮೀಕ್ಷೆಗಳನ್ನೂ ಸಮಿತಿ ಸ್ವೀಕರಿಸಿ ಪರಿಶೀಲಿಸುತ್ತಿದೆ. ಅಂತಿಮ ವರದಿ ರೂಪಿಸಲು ಇನ್ನೂ 2-3 ಸಭೆಗಳನ್ನು ನಡೆಸುವ ಅಗತ್ಯವಿದ್ದು, ಕನಿಷ್ಠ ಮತ್ತೆ ಒಂದು ವಾರ ಅವಶ್ಯವಿದೆ ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಮೊದಲಿನಿಂದಲೂ ವಿಳಂಬ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಜೂ.10ರಂದು ಸಭೆ ಮಾಡಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣ ಬ್ಯಾನ್ ಮಾಡಿದ್ದರು. ಬಳಿಕ ಸರ್ಕಾರಿ ಆದೇಶ ಹೊರಡಿಸಲು ವಿಳಂಬ ಮಾಡಿದ್ದರು. ಈ ವಿಳಂಬ ನೀತಿಯನ್ನು ಮಾಧ್ಯಮಗಳು ಪ್ರಚಾರ ಮಾಡಿದ್ದರಿಂದ ಸಭೆ ನಡೆದ 5 ದಿನಗಳ ಬಳಿಕ ಸಮಿತಿ ರಚಿಸಲು ಸರ್ಕಾರ ಆದೇಶಿಸಿತ್ತು.

ತಕ್ಷಣಕ್ಕೆ ವರದಿ ನೀಡಲು ಸಾಧ್ಯವಿಲ್ಲ. ಎಲ್ಲ ಅಭಿಪ್ರಾಯ ಕ್ರೋಡೀಕರಿಸಿ ರ್ಚಚಿಸಿ, ಬಳಿಕ ಎಲ್ಲರ ಸಹಮತ ಪಡೆದು ವರದಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಮತ್ತಷ್ಟು ಕಾಲಾವಕಾಶದ ಅಗತ್ಯವಿದೆ. | ಡಾ.ಎಂ.ಕೆ.ಶ್ರೀಧರ್ ಆನ್​ಲೈನ್ ಸಮಿತಿ ಅಧ್ಯಕ್ಷ https://www.vijayavani.net/centre-readies-for-unlock-2-intl-air-travel-schools-metros-may-resume-next-week/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net