

ಯಣದ ತೃತೀಯ-ಕಾಂಡವಾದ ಅರಣ್ಯ-ಕಾಂಡವೂ ಸ್ವಾರಸ್ಯ ಮಯವಾದದ್ದೇ. ಅದರಲ್ಲಾಗುವ ಒಂದು ದುರಂತವೆನ್ನ ಬಹುದಾದ, ಹಾಗೂ ಸಹೃದಯ-ವಾಚಕ/ಶ್ರಾವಕರಿಗೆ ಮನ ನೋಯಿಸುವ, ಪ್ರಸಂಗವೆಂದರೆ ರಾವಣನು ಮಾಡುವ ಸೀತಾಪಹರಣವೇ ಸರಿ. ಸೀತಾಪಹಾರವು ರಾವಣನಿಗೆ ಸಂತಸವನ್ನುಂಟುಮಾಡಿರ ಬಹುದು. ಆದರೆ ಎಲ್ಲರಿಗೂ ನೋವೇ ಅದು. ಯಾರು ಯಾರಿಗೆ ನೋವು? ಆಹಾ, ಯಾರಿಗಿಲ್ಲ?-ಎಂದೇ ಕೇಳಬಹುದೋ ಏನೋ.
ಆ ಸಂನಿವೇಶದಲ್ಲಿದ್ದ ವೃಕ್ಷಗಳೂ, ಸರೋವರಗಳೂ, ಸಿಂಹ-ವ್ಯಾಘ್ರ ಗಳೂ, ಮೃಗಪಕ್ಷಿಗಳೂ ಪರ್ವತಗಳೂ, ಜಿಂಕೆಯ ಮರಿಗಳೂ, ವನದೇವತೆಗಳೂ - ಎಲ್ಲರಿಗೂ ನೋವು ಉಂಟೇ ಆಯಿತು! ಹಾಗೆಂದು ನಾಲ್ಕಾರು ಶ್ಲೋಕಗಳಲ್ಲಿ ವಾಲ್ಮೀಕಿಗಳೇ ಚಿತ್ರಿಸಿದ್ದಾರೆ: ಕಮಲ- ರಹಿತವಾಗಿ ಸರೋವರಗಳು ಅನುಶೋಕಪಟ್ಟವು. ಸೀತೆಯ ನೆರಳನ್ನು ಅನುಸರಿಸಿ ಹೋಗುತ್ತಾ ಸಿಂಹ- ವ್ಯಾಘ್ರ- ಮೃಗಗಳೂ ತಮ್ಮ ರೋಷವನ್ನು ವ್ಯಕ್ತಪಡಿಸಿದವು. ಶೃಂಗಗಳೆಂಬ ತಮ್ಮ ತೋಳುಗಳನ್ನೆತ್ತಿ ಪರ್ವತಗಳು ವಿಕ್ರೋಶಿಸುತ್ತಿದ್ದಂತಿತ್ತು, ಆಗ. ಸೂರ್ಯನೂ ಮಂಕಾದನು. ಧರ್ಮವೆಂಬುದಿಲ್ಲ, ಸತ್ಯ ವಿನ್ನೆಲ್ಲಿ, ಕಾರುಣ್ಯವೆನ್ನುವುದಿಲ್ಲವಾಗಿದೆ! ಎಂದೆಲ್ಲ ಭಾವಿಸುತ್ತಾ ಜಿಂಕೆಗಳ ಮರಿಗಳೂ ಬೆದರಿ ಅತ್ತವಂತೆ! ವನದೇವತೆಗಳೂ ನಡುಗಿ ಹೋದರು-ಎಂದೆಲ್ಲಾ ನಿರೂಪಿಸಿದ್ದಾರೆ, ವಾಲ್ಮೀಕಿಗಳು. ಕುಜನರ ಕುಕೃತ್ಯಗಳಿಗೆ ಖುಷಿಪಡುವವರೂ ಇದ್ದಾರೇ?
ಇದ್ದರು - ಎನ್ನುತ್ತಾರೆ, ವಾಲ್ಮೀಕಿಗಳೇ! ಯಾರು? ‘ಆಹಾ! ಕೆಲಸ ವಾಯಿತು!’ (ಕೃತಂ ಕಾರ್ಯಂ!) - ಎಂದು ಉದ್ಗರಿಸಿದನಂತೆ, ಶ್ರೀಮಾನ್ ಬ್ರಹ್ಮನೇ! ಇದೇನು ಬ್ರಹ್ಮನಿಗೆ ತುಷ್ಟಿಯಾಯಿತೇ? ಅವನಿಗೆ ಮಾತ್ರವಲ್ಲ. ದಂಡಕಾರಣ್ಯ-ವಾಸಿಗಳಾದ ಪರಮರ್ಷಿ ಗಳ ನಡೆಯು ಬ್ರಹ್ಮನಿಗಿಂತ ಸ್ವಲ್ಪ ವಾಸಿಯೇನೋ? ಏಕೆ? ಅವರೂ ತುಂಬಾ ಸಂತೋಷಗೊಂಡವರೇ; ಜೊತೆಗಿಷ್ಟು ವ್ಯಥೆಯನ್ನೂ ಪಟ್ಟರು - ಎನ್ನುತ್ತಾರೆ ವಾಲ್ಮೀಕಿಗಳು. ಸೀತೆಗಿಂತಹ ಪರಾಭವವಾಯಿತಲ್ಲಾ! - ಎಂದು ದುಃಖ. ಹಾಗಾದರೆ ಪ್ರಹರ್ಷವೇತಕ್ಕೆ? ಏತಕ್ಕೆಂದರೆ, ‘ಓ, ರಾವಣನ ವಿನಾಶ ಇನ್ನೇನು ಸಮೀಪಿಸುತ್ತಿದೆ’- ಎಂದು! ಇವರೆಲ್ಲರ ಪ್ರತಿಕ್ರಿಯೆಗಳೇನೇ ಇರಲಿ, ಸೀತೆಯೇ ಆ ಸಂದರ್ಭವನ್ನು ಹೇಗೆ ಎದುರಿಸಿದಳು? ಎಂಬುದನ್ನೊಮ್ಮೆ ನೋಡಬೇಕಲ್ಲವೇ? ಸೀತೆಗೆ ರೋಷವೂ ರೋದನವೂ ಉಕ್ಕಿಬಂದವು. ಅಳುತ್ತಲೇಆ ದುಷ್ಟ-ರಾವಣನನ್ನು ಕುರಿತು ಮೂದ ಲಿಸಿ ಹೇಳಿದಳು, ಆಧೀರ-ಪತಿವ್ರತೆ: ನಾಚಿಕೆ ಯಾಗುವುದಿಲ್ಲವೇ ನಿನಗೆ? ನಾನು ಒಂಟಿಯಾಗಿರುವುದನ್ನು ಖಚಿತಪಡಿಸಿ
ಕೊಂಡು ಹೀಗೆ ಅಪಹರಿಸಿ ಕೊಂಡು ಓಡಿಹೋಗುತ್ತಿರುವೆಯೆಲ್ಲಾ! ಹೇಡಿ ಯಾದ ನೀನು ನನ್ನನ್ನು ಕದಿಯಲೆಂದೇ ಮೃಗ-ರೂಪದ ಮಾಯೆಯಿಂದ ನನ್ನ ಪತಿಯನ್ನು ಸಾಗ ಹಾಕಿರುವೆ. ನೀನೇನು ನನ್ನನ್ನು ಯುದ್ಧದಲ್ಲಿ ಗೆದ್ದು ಹೊತ್ತುಕೊಂಡು ಹೋಗುತ್ತಿರುವೆಯಾ?: ನಿನ್ನ ಶೌರ್ಯಕ್ಕೆ ಧಿಕ್ಕಾರ! ನಿಲ್ಲು. ಆ ರಾಜಕುಮಾರರಿಬ್ಬರ (ರಾಮ-ಲಕ್ಷ್ಮಣರ) ಕಣ್ಣಿಗೆ ಬಿದ್ದೆಯೋ, ನೀ ಸತ್ತಂತೆಯೇ ಸರಿ.
ಮರಣವು ಸಮೀಪಿಸಿರುವವನು ವಿರುದ್ಧವಾದವುಗಳನ್ನೇ ಸೇವಿಸುವನು. ಪಥ್ಯವಾದದ್ದು ರುಚಿಸುವುದೇ ಇಲ್ಲ - ಸಾಯಲಿರುವವರಿಗೆ (ಯತ್ ಪಥ್ಯಂ ತನ್ನ ರೋಚತೇ)! ಇದೋ ನಿನ್ನ ಕುತ್ತಿಗೆಗೆ ಯಮ-ಪಾಶವು ಬಿಗಿದುಕೊಂಡಿರುವುದು ನನಗೆ ಕಾಣುತ್ತಿದೆ! ಏಕೆಂದರೆ ಹೆದರಬೇಕಾದೆಡೆ ನೀನು ಹೆದರುತ್ತಿಲ್ಲ ಎಂದೆಲ್ಲ ಹೇಳಿದಳು. ಇಲ್ಲಿ ರಾವಣನು ತಪ್ಪು ಹೆಜ್ಜೆಯಿಡುತ್ತಿರುವುದು ಸುಜ್ಞೇಯವಾಗಿದೆ: ಪಶು-ಪ್ರಾಣಿಗಳಿಗೂ ಗೊತ್ತಾಗುವಂತಹು ದದು! ಇನ್ನು ಮಹಾ-ವಿದ್ವಾಂಸನಾದ ರಾವಣನ ಅರಿವಿಗೆ ಬರದಿರುವಂತಹುದೇ? ಸಾಲದೆಂದು, ಈ ದುಷ್ಕೃತ್ಯವಾಗುವುದಕ್ಕೆ ಮೊದಲೇ ಮಾರೀಚನೆಚ್ಚರಿಸಿದ್ದ; ದುಷ್ಕೃತ್ಯವಾಗುತ್ತಿರುವಾಗ ಸೀತೆ ಎಚ್ಚರಿಸಿದ್ದಾಳೆ; ಮುಂದೆಯೂ ವಿಭೀಷಣನು ಎಚ್ಚರಿಸುವವನಿದ್ದಾನೆ. ಆದಿ- ಮಧ್ಯ- ಅಂತಗಳಲ್ಲಿ ಎಲ್ಲರೂ ಎಚ್ಚರವಿತ್ತರೂ ಪರಿಣಾಮವು ಮಾತ್ರ ದೊಡ್ಡಸೊನ್ನೆಯೇ. ಗೊತ್ತಿದ್ದೂ ತಪ್ಪುಮಾಡುವುದೆಂದರೇನು? ತನ್ನ ಕೃತ್ಯದ ವಾಸ್ತವವಾದ ಪರಿಣಾಮದ ಬಗ್ಗೆ ಪೂರ್ಣವಾದ/ಖಚಿತವಾದ ಅರಿವಿಲ್ಲ
ವೆಂದೇ! ಅರ್ಥಾತ್, ಅದು ಜ್ಞಾನದ ತೋರ್ಕೆಯುಳ್ಳ ಅಜ್ಞಾನವೆಂದೇ! ಕುಡುಕನು ಕಡುಬುದ್ಧಿವಂತನಿದ್ದರೂ, ಮತ್ತು ಮೂಡಿದಾಗ ಮತಿಯು ಮಂಕೇ - ಅಲ್ಲವೇ? ತಾನೇ ಸುಲಭವಾಗಿ ಪರಿಕಿಸಿಕೊಳ್ಳಬಹುದಾದುದ್ದಕ್ಕೆ ಪರರು ಸಹ ಪರಿಪರಿಯಾಗಿ ಪರಿಶೀಲನವಿತ್ತರೂ, ಅದರ ಆಂತರ್ಯವನ್ನು ಅರಿತುಕೊಳ್ಳಲಾರ, ಮತ್ತೇರಿದ ಕುಡುಕ! ಸಾವಿನ ತಾವಿನತ್ತ ಹಠದಿಂದ ಹೊರಟವನನ್ನು ಬಿರುನುಡಿಗಳಿಂದ ಬೆದರಿಸಿ ಬೆಚ್ಚಿಸಿ ಎಚ್ಚರಿಸಲಾದೀತೇ? ಅಥವಾ ಸವಿನುಡಿ ಗಳಿಂದ ಸರಿಮಾರ್ಗದತ್ತ ಸರಿಸಲಾದೀತೇ? ವಿನಾಶ-ಕಾಲವು ಕಾಲಿಡುತ್ತಿರಲು ಬುದ್ಧಿಯು ವಿಪರೀತವೇ ಆಗುವುದು. ವಿಪರೀತ ವೆಂದರೆ ವಿರುದ್ಧವಾದದ್ದು: ಪಥ್ಯವಾದದ್ದು ಅಪಥ್ಯವಾಗಿ ತೋರು ವಂತಾಗುವುದು. ಜವರಾಯನ ಹವಣಿಕೆಯಲ್ಲದೆ ಮತ್ತೇನದು? ದುಷ್ಟರು ನಷ್ಟರಾಗುವುದನ್ನು ಎಲ್ಲರೂ ಇಷ್ಟಪಡುವವರೇ. ಎಂದೇ ಸೀತಾಪಹರಣವಾಗುವಾಗ ಬ್ರಹ್ಮನಿಗೆ ಸಮಾಧಾನವಾದದ್ದು, ದಂಡಕಾರಣ್ಯದ ಪರಮರ್ಷಿಗಳಿಗೆ ಪರಮ-ಹರ್ಷವೇ ಆದದ್ದು!
(ಲೇಖಕರು ಆಧ್ಯಾತ್ಮಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)