

ನವದೆಹಲಿ: ನೈಋತ್ಯ ರೈಲ್ವೆ ವತಿಯಿಂದ ನಡೆಯಬೇಕಿರುವ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲು ಕೇಂದ್ರ ರೈಲ್ವೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ.
ನೈಋತ್ಯ ರೈಲ್ವೆ ವಲಯದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮನವಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆ, ಈ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಿದೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ನೈಋತ್ಯ ರೈಲ್ವೆ ವತಿಯಿಂದ ನಡೆಯಬೇಕಿದ್ದ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷಾ ಸುತ್ತೋಲೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದಿರುವುದನ್ನು ಇಂದು ಮಾನ್ಯ ರೈಲ್ವೆ ಇಲಾಖೆ ರಾಜ್ಯ ಸಚಿವರಾದ ವಿ.ಸೋಮಣ್ಣ ರವರ ಗಮನಕ್ಕೆ ತಂದಿದ್ದು, ಕನ್ನಡದಲ್ಲಿಯೂ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಮಾಡಿದ್ದ ಮನವಿಯನ್ನು ತಕ್ಷಣವೇ ಪುರಸ್ಕರಿಸಿ ಆದೇಶ ಹೊರಡಿಸಿರುವುದು ಅಭಿನಂದನಾರ್ಹ ಕ್ರಮ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮತ್ತು ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಂದೆಂದಿಗೂ ಕಟಿಬದ್ಧವಾಗಿದೆ. ಇದರಿಂದ ಮಾತೃಭಾಷೆ ಕನ್ನಡದಲ್ಲಿ ಪರೀಕ್ಷೆ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ತುರ್ತಾಗಿ ಸ್ಪಂದಿಸಿ ಕ್ರಮ ಕೈಗೊಂಡಿರುವ ನಮ್ಮ ಕನ್ನಡದವರೇ ಆದ ಸಚಿವ ಶ್ರೀ ವಿ ಸೋಮಣ್ಣ ರವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನೈಋತ್ಯ ರೈಲ್ವೆಯು ಸಹಾಯಕ ಲೋಕೋಪೈಲಟ್ ಹುದ್ದೆಗಳಿಗೆ ಮೇ ತಿಂಗಳಲ್ಲಿ ಸಾಮಾನ್ಯ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಯ ಸುತ್ತೋಲೆ ಹೊರಡಿಸಿತ್ತು. ಇದರಲ್ಲಿ ರಾಜ್ಯದ ಅಧಿಕೃತ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವಿತ್ತು. ಹೀಗಾಗಿ ಕನ್ನಡಿಗ ಅಭ್ಯರ್ಥಿಗಳು ಪರೀಕ್ಷಾ ಸಿದ್ಧತೆ ಕೈಗೊಂಡಿದ್ದರು. ಆಗಸ್ಟ್ 3ಕ್ಕೆ ಈ ಪರೀಕ್ಷೆಯಿದೆ. ಆದರೆ, ಈ ನಡುವೆ ಪರೀಕ್ಷಾರ್ಥಿಗಳಿಗೆ ನೀಡಲಾದ ಹಾಲ್ ಟಿಕೆಟ್ನಲ್ಲಿ ಹಿಂದಿ, ಇಂಗ್ಲಿಷ್ನಲ್ಲಿ ಮಾತ್ರ ಪರೀಕ್ಷೆ ಬರೆವಂತೆ ಆಯ್ಕೆ ನೀಡಲಾಗಿತ್ತು.