

ಬೆಂಗಳೂರು: ಸಂಪೂರ್ಣ ವಿಶ್ವವೇ ಭಯಭೀತವಾಗುವಂತೆ ಕಾಡಲಾರಂಭಿಸಿರುವ ಕರೊನಾ ವೈರಸ್ ದೇಶ ಮತ್ತು ರಾಜ್ಯದಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಪಂಚದಾದ್ಯಂತ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿರುವ ಕರೊನ ವೈರಸ್ ಇದೀಗ ಕರ್ನಾಟಕದ ಕೊಡಗಿನಲ್ಲಿಯೂ ಕಾಣಿಸಿಕೊಂಡಿದೆ.
ಸೌದಿ ಅರೇಬಿಯಾದಿಂದ ಪ್ರವಾಸ ಮುಗಿಸಿ ಕೊಡಗು ಜಿಲ್ಲೆಗೆ ಮರಳಿದ್ದ ವ್ಯಕ್ತಿಯೊಬ್ಬರಲ್ಲಿ ಕರೊನಾ ವೈರಸ್ ಇರುವುದು ಧೃಡವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ವೈರಸ್ ಸೋಂಕಿತರ ಸಂಖ್ಯೆ 14ರಿಂದ 15ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಸದ್ಯ ಸೋಂಕು ಪತ್ತೆಯಾಗಿರುವ ವ್ಯಕ್ತಿಯನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದ್ದು ನಿಗಾ ವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕರೊನಾ ವೈರಸ್ ತಡೆಗೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಾರ್ಚ್ 14ರಿಂದ ಕರ್ನಾಟಕದಲ್ಲಿ ಅರೆ ಬಂದ್ ನಡೆಸಲು ಸರ್ಕಾರ ಆದೇಶಿಸಿದ್ದು, ಮಾಲ್ ಥಿಯೇಟರ್ ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿದೆ.