

ವಿಜಯವಾಡ: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಹಾವಳಿ ಹೆಚ್ಚಾಗಿದ್ದು, ಒಳ್ಳೆಯ ಕೆಲಸ ಮತ್ತು ಕೆಟ್ಟ ಕೆಲಸಗಳಿಗೆ ಈ ಪ್ಲಾಟ್ಫಾರ್ಮ್ ಅನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಲ್ಲೂ ಇಂದು ಯೂಟ್ಯೂಬರ್ಗಳ ವಿಡಿಯೋಗಳು ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತವೆ. ವಿಭಿನ್ನ ಹಾಗೂ ವಿಶೇಷ ರೀತಿಯಲ್ಲಿ ಜನರ ಗಮನಸೆಳೆದು ಲಕ್ಷಾಂತರ ಅಭಿಮಾನಿಗಳನ್ನು ತಮ್ಮ ಅನುಯಾಯಿಗಳನ್ನಾಗಿ ಮಾಡಿಕೊಳ್ಳುವ ಯೂಟ್ಯೂಬರ್ಗಳ ಮಧ್ಯೆ ಹರ್ಷ ಸಾಯಿ (Harsha Sai) ಮುಂಚೂಣಿಯಲ್ಲಿದ್ದಾರೆ. ತನ್ನ ಕಣ್ಣಿಗೆ ಬಿದ್ದ ಬಡವರಿಗೆ ಲಕ್ಷ ಲಕ್ಷ ಹಣ ಹಂಚುತ್ತಿದ್ದ ಹರ್ಷ, ಇದೀಗ ಪೊಲೀಸರ ಅತಿಥಿಯಾಗಿರುವುದು ಸದ್ಯ ಹಲವರಿಗೆ ಭಾರೀ ಅಚ್ಚರಿ ಮೂಡಿಸಿದೆ.
ತೆಲುಗು ರಾಜ್ಯಗಳಲ್ಲಿ ಇವರ ಹೆಸರು ಒಂದು ರೀತಿ ಬ್ರ್ಯಾಂಡ್ ಎಂದರೆ ತಪ್ಪಾಗಲಾರದು. ಬಡವರಿಗೆ ಸಹಾಯ ಮಾಡುವ ಮೂಲಕ ಉತ್ತಮ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಹರ್ಷ, ಬಡವರಿಗೆ ಟಿವಿ, ಫ್ರಿಡ್ಜ್ ಕೊಡುವುದು ಮತ್ತು ಹಣದ ಅವಶ್ಯಕತೆ ಇರುವವರಿಗೆ ಆರ್ಥಿಕ ನೆರವನ್ನು ಒದಗಿಸುವುದು ಸೇರಿದಂತೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಬಡವರ ಆರ್ಶೀವಾದಗಳಿಂದಲೇ ಈ ಕಾರ್ಯವನ್ನು ಮುಂದುವರೆಸಿದ್ದ ಹರ್ಷ ಸಾಯಿ ವಿರುದ್ಧ ಇತ್ತೀಚೆಗಷ್ಟೇ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಯುವತಿಯೊಬ್ಬಳು ಹರ್ಷ ಸಾಯಿ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು (Case against harsha). ಇದೀಗ ಮತ್ತೊಂದು ಕೇಸ್ ಬೆಳಕಿಗೆ ಬಂದಿರುವುದು ಅವರ ಅಭಿಮಾನಿಗಳಲ್ಲಿ ತೀವ್ರ ಗೊಂದಲ ಹುಟ್ಟುಹಾಕಿದೆ.
ಹರ್ಷ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಯೂಟ್ಯೂಬರ್ ನಡೆಸುತ್ತಿದ್ದ ಫೌಂಡೇಶನ್ ವಿರುದ್ಧ ರಾಚಕೊಂಡ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನೆರವಿನ ಹೆಸರಿನಲ್ಲಿ 5.4 ಲಕ್ಷ ರೂ. ವಸೂಲಿ ಮಾಡಿ ವಂಚಿಸಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ದೂರಿದ್ದಾರೆ. ಪೊಲೀಸರು ಹರ್ಷ ವಿರುದ್ಧ ಸೆಕ್ಷನ್ 406, 419, 420, ಐಪಿಸಿ, 66ಸಿ ಮತ್ತು 66ಡಿ ಅಡಿಯಲ್ಲಿ ಪ್ರಕರಣ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಪ್ರಕರಣದಿಂದ ಹರ್ಷ ಸಾಯಿ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಒಟ್ಟಾರೆ ಈ ಪ್ರಕರಣಗಳು ಯಾವ ಹಂತಕ್ಕೆ ಹೋಗಿ ತಲುಪಲಿದೆ? ಹರ್ಷ ಕೇಸ್ ಏನಾಗಲಿದೆ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.
ಇದನ್ನೂ ಓದಿ: ಸಂಸ್ಕೃತಿಯ ಬೇರುಗಳು ಸದೃಢವಾದಲ್ಲಿ ಸಮಾಜದ ಪ್ರಗತಿ
ಹರ್ಷ ಸಾಯಿ ತನ್ನನ್ನು ಮದುವೆಯಾಗುವುದಾಗಿ ವಂಚಿಸಿದ್ದಲ್ಲದೆ, 2 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾನೆ ಮತ್ತು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಹೀಗಾಗಿ ಪೊಲೀಸರು ಹರ್ಷ ಸಾಯಿ ವಿರುದ್ಧ ಸೆಕ್ಷನ್ 376 ಮತ್ತು 354ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ,(ಏಜೆನ್ಸೀಸ್).