ಕನ್ನಡಕ್ಕೆ ಮತ್ತೊಬ್ಬ ಬಾಲಿವುಡ್ ನಟಿ; ರವಿಚಂದ್ರನ್​ಗೆ ನಾಯಕಿ..

Movie
Published on

ಬೆಂಗಳೂರು: ಕಳೆದ ಎರಡು ದಶಕಗಳಿಂದ 20ಕ್ಕೂ ಹೆಚ್ಚು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಕಿರುತೆರೆ ನಟಿ ಬರ್ಖಾ ಬಿಷ್ಟ್. ಕೆಲವು ಬಾಲಿವುಡ್ ಚಿತ್ರಗಳು, ವೆಬ್ ಸರಣಿಗಳಲ್ಲು ನಟಿಸಿದ್ದಾರೆ. 2019ರಲ್ಲಿ ಬಿಡುಗಡೆಯಾದ ಪ್ರಧಾನಿ ಮೋದಿ ಬಯೋಪಿಕ್ ‘ಪಿಎಂ ನರೇಂದ್ರ ಮೋದಿ’ ಚಿತ್ರದಲ್ಲಿ ಅವರು, ಮೋದಿ ಪತ್ನಿ ಜಶೋದಾಬೆನ್ ಪಾತ್ರದಲ್ಲಿ ಅಭಿನಯಿಸಿದ್ದರು. ಬಳಿಕ ಯಾವ ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ಬರ್ಖಾ ಮೊದಲ ಕನ್ನಡ ಚಿತ್ರದ ಮೂಲಕ ಸಿನಿಮಾರಂಗಕ್ಕೆ ವಾಪಸ್ಸಾಗಿದ್ದಾರೆ. ಇತ್ತೀಚೆಗಷ್ಟೇ ಸೆಟ್ಟೇರಿದ ‘ಗೌರಿ’ ಚಿತ್ರದಲ್ಲಿ ನಟ ರವಿಚಂದ್ರನ್​ಗೆ ನಾಯಕಿಯಾಗಿದ್ದಾರೆ.

ಶಿವರಾಜಕುಮಾರ್ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ ಚಿತ್ರತಂಡಕ್ಕೆ ಶುಭಕೋರಿದರು. ಕೆಲವು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿರುವ ಅನೀಸ್​ಗೆ ‘ಗೌರಿ’ ಚೊಚ್ಚಲ ನಿರ್ದೇಶನ. ‘ಕನ್ನಡ ಚಿತ್ರರಂಗಕ್ಕೆ ಈಗ ಒಳ್ಳೆಯ ಕಾಲ. ವಿಶ್ವಾದ್ಯಂತ ಕನ್ನಡ ಸಿನಿಮಾಗಳು ಹೆಸರು ಮಾಡುತ್ತಿವೆ. ಅದರಲ್ಲೂ ವಿಭಿನ್ನ ಕಥೆಯ ಚಿತ್ರಗಳನ್ನು ಪ್ರೇಕ್ಷಕ ಮೆಚ್ಚಿಕೊಳ್ಳುತ್ತಿದ್ದಾನೆ. ‘ಗೌರಿ’ ಸಹ ವಿಭಿನ್ನ ಕಥಾಹಂದರವಿರುವ ಸಿನಿಮಾ. ಇಡೀ ಚಿತ್ರ ಕೇವಲ ಮೂರು ಪಾತ್ರಗಳ ಸುತ್ತ ಸುತ್ತುತ್ತದೆ. ಜತೆಗೆ ಕೆಲವು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿದ್ದೇವೆ’ ಎಂದು ಅನೀಸ್ ಮಾಹಿತಿ ನೀಡಿದರು.

ಹೊಸ ವರ್ಷಕ್ಕೆ ಹೊಸ ಬಗೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ರವಿಚಂದ್ರನ್ ಸಂತಸ ಹಂಚಿಕೊಂಡರು. ಬಳಿಕ ಬರ್ಖಾ ಬಿಷ್ಟ್, ‘ನನಗಿದು ಕನ್ನಡದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೇ ಮೊದಲ ಚಿತ್ರ. ರವಿಚಂದ್ರನ್ ಸರ್ ಜತೆ ನಟಿಸುತ್ತಿರುವ ಖುಷಿಯಿದೆ’ ಎಂದರು. ದಾಂಡೇಲಿ ಮತ್ತು ಯಲ್ಲಾಪುರದಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net