

Patna: ಬಿಹಾರ ಸಚಿವ (Bihar Election) ಮತ್ತು ಅಮರ್‌ಪುರ ವಿಧಾನಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಜಯಂತ್ ರಾಜ್, ಶುಕ್ರವಾರ( ಅ 17) ಒಂದು ನಿಮಿಷ ತಡವಾಗಿದ್ದಕ್ಕೆ ಇಂದು ನಾಮಪತ್ರ ಸಲ್ಲಿಸುವ ಅವಕಾಶ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮಧ್ಯಾಹ್ನ 3 ಗಂಟೆಯ ಗಡುವಿನ ಬಳಿಕ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ರಾಜ್‌ಗೆ ಅಧಿಕೃತ ಸಮಯ ಮುಗಿದಿದ್ದರಿಂದ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿಲ್ಲ.
ಈ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ರಾಜ್, ಚುನಾವಣಾ ಆಯೋಗದ ನಿಯಮಗಳು ಮತ್ತು ಆದೇಶಗಳು ಸರ್ವೋಚ್ಚ. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದಿದ್ದು, ಶನಿವಾರ ಮತ್ತೆ ನಾಮಪತ್ರ ಸಲ್ಲಿಸುವುದಾಗಿ ಇದೇ ವೇಳೆ ತಿಳಿಸಿದರು.
ಅಮರ್‌ಪುರ ವಿಧಾನಸಭಾ ಕ್ಷೇತ್ರ ಬಂಕಾ ಜಿಲ್ಲೆಯ ವ್ಯಾಪ್ತಿಗೆ ಬರಲಿದ್ದು, ನವೆಂಬರ್ 11 ರಂದು ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ. ಈ 122 ಕ್ಷೇತ್ರಗಳಿಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದೆ.
ಮುಂಬರುವ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಲಿರುವ ಎಲ್ಲಾ 101 ಸ್ಥಾನಗಳಿಗೂ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಅಂತಿಮಗೊಳಿಸಿದೆ. ಜೆಡಿಯು ತನ್ನ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಆದ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) ಮೇಲೆ ಹೆಚ್ಚು ಅವಲಂಬಿತವಾಗಿದೆ ಎನ್ನಲಾಗಿದ್ದು, ಈ ವರ್ಗಗಳಿಂದ 37 ಮತ್ತು 22 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮೇಲ್ಜಾತಿಯವರು 22 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದ್ದು, ನಾಲ್ವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣದಲ್ಲಿದ್ದಾರೆ. ಕಳೆದ ವಾರ ಜೆಡಿ(ಯು) ಸೇರಿದ ವಿಭಾ ದೇವಿ, ಐದು ವರ್ಷಗಳ ಹಿಂದೆ ಆರ್‌ಜೆಡಿ ಅಭ್ಯರ್ಥಿಯಾಗಿ ಗೆದ್ದಿದ್ದ ನವಾಡಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದ್ದ ಮಾಜಿ ಸಂಸದರಾದ ದುಲಾಲ್ ಚಂದ್ರ ಗೋಸ್ವಾಮಿ, ಮಹಾಬಲಿ ಸಿಂಗ್ ಮತ್ತು ಚಂದ್ರೇಶ್ವರ ಚಂದ್ರವಂಶಿ ಅವರಿಗೆ ಜೆಡಿಯು ಟಿಕೆಟ್ ನೀಡಿದೆ. ಗಮನಾರ್ಹವಾಗಿ, ಒಂದು ದಶಕದ ಹಿಂದೆ ಪಕ್ಷವನ್ನು ತೊರೆದ ಡಾನ್-ಬದಲಾದ ರಾಜಕಾರಣಿ ಅನಂತ್ ಸಿಂಗ್ ಅವರನ್ನು ಮೊಕಾಮಾದಿಂದ ಟಿಕೆಟ್ ಮೂಲಕ ಮತ್ತೆ ಕಣಕ್ಕೆ ಬಂದಿದ್ದಾರೆ.
ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಗೆ ನಿತೀಶ್ ಕುಮಾರ್ ಧ್ವನಿ ಎತ್ತಿದ್ದರೂ, ಜೆಡಿ(ಯು) ಪಟ್ಟಿಯಲ್ಲಿ ಕೇವಲ 13 ಮಹಿಳೆಯರು ಮಾತ್ರ ಸ್ಥಾನ ಪಡೆದಿದ್ದಾರೆ. ಇದು ಅದರ ಒಟ್ಟು ಅಭ್ಯರ್ಥಿಗಳಲ್ಲಿ 15% ಕ್ಕಿಂತ ಕಡಿಮೆ. ಬಿಹಾರದಲ್ಲಿ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲಾ 243 ವಿಧಾನಸಭಾ ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.(ಏಜೆನ್ಸೀಸ್)