

ಬೆಂಗಳೂರು: ಕೆಲ ತಿಂಗಳ ಹಿಂದೆ ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಸ್ಪೋಟದ ಘಟನೆ ಮಾಸುವ ಮುನ್ನವೇ ಇದೀಗ ಜೆಪಿ ನಗರದ ನಾಲ್ಕನೇ ಹಂತದಲ್ಲಿರುವ ಪುಟ್ಟೇನಹಳ್ಳಿಯಲ್ಲಿ ಕುಕ್ಕರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೋರ್ವನಿಗೆ ಗಂಭೀರ ಗಾಯವಾಗಿದೆ.
ಮೃತನನ್ನು ಉತ್ತರಪ್ರದೇಶ ಮೂಲದ ಮೋಸಿನ್ ಎಂದು ಗುರುತಿಸಲಾಗಿದ್ದು, ಈತ ಜೆಪಿ ನಗರದಲ್ಲಿರುವ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಗಾಯಾಳು ಹೆಸರು ಸಮೀರ್ ಎಂದು ತಿಳಿದು ಬಂದಿದ್ದು, ಈತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ಹೊತ್ತಿಗೆ ಈ ಸ್ಪೋಟ ಸಂಭವಿಸದೆ. ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕರಾದ ಸಮೀರ್ ಹಾಗೂ ಮೋಸಿನ್ ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸವಿದ್ದರು. ಪಲಾವ್ ಮಾಡಲೆಂದು ಸ್ಟೌ ಮೇಲೆ ಕುಕ್ಕರ್ ಇಟ್ಟು ಮಲಗಿದ್ದ ಯುವಕರು. ಈ ವೇಳೆ ಕುಕ್ಕರ್ ಸ್ಫೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ.
ಕುಕ್ಕರ್ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ವೈರ್ಗಳು ಪತ್ತೆಯಾಗಿದ್ದು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೋಸಿನ್ ಮೃತಪಟ್ಟಿದ್ದು, ಸಮೀರ್ಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎನ್ಐಎ ಹಾಗೂ ಕೇಂದ್ರ ತನಿಖಾ ತಂಡ ಭೇಟಿ ಪರಿಶೀಲನೆ ನಡೆಸುತ್ತಿದೆ.
ಘಟನೆ ಕುರಿತು ಮಾತನಾಡಿರುವ ನಗರ ಪೊಲೀಸ್ ಆಯುಕ್ತ ದಯಾನಂದ್, ಭಯೋತ್ಪಾದಕ ಕೃತ್ಯ ಅಲ್ಲ. ಕುಕ್ಕರ್ ಬ್ಲಾಸ್ ಆಗಿದೆ. ಬಳಿಕ ಶಾರ್ಟ್ ಸೆರ್ಕ್ಯೂಟ್ ಆಗಿದೆ. ಓರ್ವ ಮೃತಪಟ್ಟಿದ್ದು, ಇನ್ನೋರ್ವನಿಗೆ ಗಂಭೀರ ಗಾಯವಾಗಿದೆ. ಸ್ಥಳದಲ್ಲಿ ಮತ್ತಷ್ಟು ಪರಿಶೀಲನೆ ನಡೆಯುತ್ತಿದ್ದು, ಯುವಕರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.