ಲಖನೌ: ಸ್ಮಾರ್ಟ್ಫೋನ್ ಯುಗದಲ್ಲಿ ಯುವ ಜನತೆ ಅಲ್ಪಕಾಲದಲ್ಲೇ ಹೆಚ್ಚು ಖ್ಯಾತಿ ಪಡೆಯಬೇಕೆಂಬ ಹಂಬಲದೊಂದಿಗೆ ಇನ್ನಿಲ್ಲದ ಕೆಲಸಕ್ಕೆ ಕೈ ಹಾಕಿ ತಮ್ಮ ಜೀವಕ್ಕೆ ಕುತ್ತು ತಂಡುಕೊಳ್ಳುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಬಿಜ್ನೋರ್ನಲ್ಲಿ ನಡೆದಿದ್ದು, ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದೆ.
ಬಿಜ್ನೋರ್ನ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ಈ ಘಟನೆ ನಡೆದಿದ್ದು, ಅಪಘಾತರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಬುಲೆಟ್ ಬೈಕ್ನಲ್ಲಿ ಕುಳಿತುಕೊಂಡು ಇಬ್ಬರು ಯುವಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೀಲ್ಸ್ ಮಾಡುತ್ತಿದ್ದಾರೆ. ಈ ವೇಳೆ ಬೈಕ್ ಚಲಾಯಿಸುತ್ತಿರುವ ಯುವಕ ಏಕಾಏಕಿ ಗಾಡಿಯನ್ನು ಬಲಕ್ಕೆ ಎಳೆದಿದ್ದು, ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದು ಮುಂದಕ್ಕೆ ಸಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರು ರಸ್ತೆಯ ಮತ್ತೊಂದು ಬದಿಗೆ ಹಾರಿ ಬಿದ್ದಿದ್ದು, ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಗಾಯಾಳುಗಳಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡುತ್ತಿದ್ದಾರೆ. ರೀಲ್ಸ್ ಮಾಡುವ ವೇಳೆ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾರನ್ನು ಹುಡುಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.