1 ಕೋಟಿ ರೂ. ಇದ್ದರೆ ಸಾಕು, ಉಪಗ್ರಹದ ನೆರವಿಲ್ಲದೆ ಬಾಹ್ಯಾಕಾಶಕ್ಕೆ ಹೋಗಿಬರಬಹುದು!

balloon
Published on

ನವೆದೆಹಲಿ: ಬಾಹ್ಯಾಕಾಶಕ್ಕೆ ಹೋಗಿಬರಲು ಸಾಕಷ್ಟು ಪೂರ್ವತಯಾರಿ, ತರಬೇತಿ ಮತ್ತು ಉಪಗ್ರಹದ ಅವಶ್ಯಕತೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿವಿಧ ರಾಷ್ಟ್ರಗಳ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವೇ ಅದೃಷ್ಟವಂತರಿಗೆ ಬಾಹ್ಯಾಕಾಶಕ್ಕೆ ಹೋಗಿಬರಲು ಅವಕಾಶ ದೊರೆಯುತ್ತದೆ ಎಂಬುದೂ ಅಷ್ಟೇ ಸತ್ಯದ ಮಾತು.

ಆದರೆ ಈಗ ವಾಯುಪಡೆ ಯೋಧರಾಗಿರದೆ ಸಾಮಾನ್ಯ ಜನರು ಕೂಡ ಯಾವುದೇ ಪೂರ್ವತಯಾರಿ, ತರಬೇತಿಯೂ ಇಲ್ಲದೆ, ಉಪಗ್ರಹವನ್ನು ಹತ್ತುವ ಗೋಜು ಇಲ್ಲದೇ ಬಾಹ್ಯಾಕಾಶಕ್ಕೆ ಹೋಗಿಬರಬಹುದು!

ಅಂಥ ಯಾವ ತಂತ್ರಜ್ಞಾನ ಆವಿಷ್ಕಾರವಾಗಿದೆ ಎಂದು ತಲೆಕರೆದುಕೊಳ್ಳಬೇಡಿ. ಇದಕ್ಕಾಗಿ ಬಲೂನ್​ಗೆ ಜೋಡಿಸಲ್ಪಟ್ಟಿರುವ ಕ್ಯಾಪ್ಸೂಲ್​ ಹತ್ತಿದರೆ ಸಾಕು. ಅದುವೇ ನಿಮ್ಮನ್ನು ಬಾಹ್ಯಾಕಾಶದ ತುದಿಗೆ ಕೊಂಡೊಯ್ದು, ಸುರಕ್ಷಿತವಾಗಿ ಭೂಮಿಗೆ ಇಳಿಸುತ್ತದೆ. ಇದರ ಅನುಭವ ಪಡೆಯಲು ಅಮೆರಿಕದ ಅಲಸ್ಕಾಕ್ಕೆ ಹೋಗುವುದು ಅನಿವಾರ್ಯ.

ನೆಪ್ಚೂನ್​ ಬಲೂನ್​: ಫ್ಲೋರಿಡಾ ಮೂಲದ ನವೋದ್ಯಮ ಸ್ಪೇಸ್​ ಪ್ರೆಸ್ಪೆಕ್ಟೀವ್​ ಸ್ಪೇಸ್​ಕ್ಷಿಪ್​ ನೆಪ್ಚೂನ್​ ಎಂಬ ಬಲೂನ್​ ಅನ್ನು ಸಿದ್ಧಪಡಿಸಿದೆ. ಫುಟ್​ಬಾಲ್​ ಕ್ರೀಡಾಂಗಣದಷ್ಟು ದೊಡ್ಡದಾಗಿರುವ ಹೈಡ್ರೋಜನ್​ ಬಲೂನ್​ಗೆ ಪ್ರೆಸರೈಸ್ಡ್​ ಕ್ಯಾಪ್ಸೂಲ್​ ಅನ್ನು ಜೋಡಣೆ ಮಾಡಲಾಗಿರುತ್ತದೆ. ಈ ಬಲೂನ್​ ಸಿಬ್ಬಂದಿ ನಿಯಂತ್ರಿಸಲಿದ್ದಾರೆ. ಒಮ್ಮೆಗೆ 8 ಜನರನ್ನು ಕೊಂಡೊಯ್ಯಲು ಸಾಧ್ಯವಾಗುವಂತೆ ಕ್ಯಾಪ್ಸೂಲ್​ ಅನ್ನು ವಿನ್ಯಾಸಗೊಳಿಸಲಾಗಿದೆ. ​ಇದರ ಉಡಾವಣೆಗಾಗಿ ಕೋಡಿಯಾಕ್​ನ ಪೆಸಿಫಿಕ್​ ಸ್ಪೇಸ್​ಪೋರ್ಟ್​ ಕಾಂಪ್ಲೆಕ್ಸ್​ ಅನ್ನು ಬಳಸಲು ನವೋದ್ಯಮದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಆರು ಗಂಟೆಯ ಪ್ರಯಾಣಕ್ಕೆ ಪ್ರತಿಯೊಬ್ಬ ಪ್ರಯಾಣಿಕರಿಗೆ ಅಂದಾಜು 1 ಕೋಟಿ ರೂಪಾಯಿ (93.34 ಲಕ್ಷ ರೂಪಾಯಿ) ಶುಲ್ಕ ನಿಗದಿಯಾಗಿದೆ.

ಇನ್ನು 5 ವರ್ಷ ಕಾಯಬೇಕು: ಈ ಯೋಜನೆಯನ್ನು ಅಲಸ್ಕಾ ಏರೋಸ್ಪೇಸ್​ ಕಾರ್ಪೋರೇಷನ್​ ನಿರ್ವಹಿಸುತ್ತಿದೆ. ಬಲೂನ್​ನಲ್ಲಿ ಬಾಹ್ಯಾಕಾಶವನ್ನು ಮುಟ್ಟಿ ಭೂಮಿಗೆ ಮರಳುವ ಸೌಲಭ್ಯ ಬಳಕೆಗೆ ಇನ್ನು ಐದು ವರ್ಷ ಕಾಯಬೇಕಾಗುತ್ತದೆ ಎಂದು ಕಂಪನಿಯ ಸಿಇಒ ಮಾರ್ಕ್​ ಲೆಸ್ಟರ್​ ಹೇಳಿದ್ದಾರೆ.

ಈ ಸೌಲಭ್ಯವನ್ನು ಕಲ್ಪಿಸಲು ಅಲಸ್ಕಾ ಏರೋಸ್ಪೇಸ್​ ಮತ್ತು ಸ್ಪೇಸ್​ ಪ್ರಸ್ಪೆಕ್ಟೀವ್​ ಸಂಸ್ಥೆಗಳು ಅಮೆರಿಕದ ವೈಮಾನಿಕ ವಿಭಾಗದಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳುತ್ತಿದೆ. ಶೀಘ್ರದಲ್ಲೇ ಲಭಿಸುವ ನಿರೀಕ್ಷೆ ಇದೆ. ಇದಾದ ಬಳಿಕ ಫ್ಲೋರಿಡಾದಲ್ಲಿರುವ ನಾಸಾದ ಕೆನೆಡಿ ಸ್ಪೇಸ್​ ಸೆಂಟರ್​ನ ಶಟಲ್​ ಲ್ಯಾಂಡಿಂಗ್​ ಸೌಲಭ್ಯ ಬಳಸಿಕೊಂಡು ಮಾನವರಹಿತ ಬಲೂನ್​ ಹಾರಾಟವನ್ನು ಕೈಗೊಳ್ಳುವ ಗುರಿ ಇದೆ ಎಂದು ಸ್ಪೇಸ್​ ಪ್ರೆಸ್ಪೆಕ್ಟೀವ್​ ಹೇಳಿದೆ.

ಪ್ರಯಾಣ ಹೀಗಿರುತ್ತೆ: ನೆಪ್ಚೂನ್​ನಲ್ಲಿ ಮೊದಲಿಗೆ ಪ್ರಯಾಣಿಕರನ್ನು ಕೂರಿಸಲಾಗುತ್ತದೆ, ಎರಡು ಗಂಟೆಗಳ ಪ್ರಯಾಣದ ಬಳಿಕ ಅವರನ್ನು ಭೂಮಿಯಿಂದ 31 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ತೇಲಾಡುತ್ತಾ, ಅಲ್ಲಿನ ಅನುಭವವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳಲು ಪ್ರಯಾಣಿಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ಬಳಿಕ ಎರಡು ಗಂಟೆ ಬಲೂನ್​ ಅನ್ನು ಕೆಳಗಿಳಿಸಿ, ಕೊಡಿಯಾಕ್​ ದ್ವೀಪ ಮತ್ತು ಅಲ್ಯೂಷಿಯನ್​ ದ್ವೀಪ ಸಮೂಹದ ಮಧ್ಯದಲ್ಲಿ ಸಮುದ್ರದೊಳಗೆ ಬೀಳಿಸಲಾಗುತ್ತದೆ. ಅಲ್ಲಿ ಸಿದ್ಧವಾಗಿ ನಿಂತಿರುವ ಹಡಗು, ಬಲೂನ್​ ಮತ್ತು ಕ್ಯಾಪ್ಸೂಲ್​ ಅನ್ನು ದಡಕ್ಕೆ ತರಲಿದೆ.

ನಾಸಾದ ವಿಜ್ಞಾನಿಗಳು ಹಲವು ದಶಕಗಳಿಂದ ದೊಡ್ಡ ಸಂಶೋಧನಾ ಟೆಲಿಸ್ಕೋಪ್​ಗಳನ್ನು ಇದೇ ತಂತ್ರಜ್ಞಾನ ಬಳಸಿ ಬಾಹ್ಯಾಕಾಶದ ತುದಿಗೆ ರವಾನಿಸುತ್ತಿದ್ದರು. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಪೇಸ್​ ಪ್ರೆಸ್ಪೆಕ್ಟೀವ್​ ಇದೀಗ ಮನುಷ್ಯರನ್ನು ಆ ಎತ್ತರದವರೆಗೆ ಕೊಂಡೊಯ್ಯಲು ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net