ಒಂದೂವರೆ ಎಕರೆ ಬೆಳೆ ನಾಶಪಡಿಸಿದ ರೈತ

30GTL1
Published on

ವಿಜಯವಾಣಿ ಸುದ್ದಿಜಾಲ ಗುತ್ತಲ

ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಾರದ ಕಾರಣ ಮನನೊಂದ ರೈತರೊಬ್ಬರು ಸಂಪೂರ್ಣ ಬೆಳೆ ನಾಶಪಡಿಸಿದ ಘಟನೆ ಹಾವನೂರ ಗ್ರಾಮದಲ್ಲಿ ನಡೆದಿದೆ.

ರೈತ ಶಿವರಾಜ ಹಡಗಲಿ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಸತತ ಮಳೆ ಹಾಗೂ ಲದ್ದಿ ಹುಳಗಳ ಕಾಟದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಮೆಕ್ಕೆಜೋಳ ಬೆಳೆದುಕೊಂಡಿರಲಿಲ್ಲ. ಇದರಿಂದ ಮನನೊಂದ ಶಿವರಾಜ ಹಡಗಲಿ ಬುಧವಾರ ಕೆಲಸಗಾರರೊಂದಿಗೆ ಸೇರಿಕೊಂಡು ಕೈಯಿಂದ ಎಲ್ಲ ಬೆಳೆಯನ್ನು ಕಿತ್ತು ನಾಶಪಡಿಸಿದ್ದಾರೆ. ನಂತರ ಅಲ್ಲಿ ಹೈಬ್ರೀಡ್ ಬಿಳಿಜೋಳ ಬಿತ್ತನೆ ಮಾಡಿದ್ದಾರೆ.

ಗುತ್ತಲ, ಹೋಬಳಿ ಭಾಗದಲ್ಲಿ ಮಳೆ ನಂತರ ಮೆಕ್ಕೆಜೋಳಕ್ಕೆ ಲದ್ದಿ ಹುಳುಗಳ ಕಾಟ ಅಧಿಕವಾಗುತ್ತಿದೆ. ಕೃಷಿ ಅಧಿಕಾರಿಗಳು ಲದ್ದಿ ಹುಳು ಬಾಧೆ ತಡೆಯಲು ಸಲಹೆ ನೀಡಬೇಕು ಹಾಗೂ ಬೆಳೆ ಕಳೆದುಕೊಂಡ ರೈತನಿಗೆ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net