

ಮಂಗಳೂರು: ನೈತಿಕ ಪೊಲೀಸ್ಗಿರಿಯಿಂದ ಆಗಾಗ ಸುದ್ದಿಯಾಗುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಅದು ಸದ್ದು ಮಾಡಿದೆ. ಹಿಂದೂ ಹುಡುಗಿಯೊಂದಿಗೆ ತಿರುಗುತ್ತಿದ್ದ ಮುಸ್ಲಿಂ ಹುಡುಗನ ಮೇಲೆ ಹಲ್ಲೆ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಘಟನೆ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಕಂಡು ಬಂದ ಹಿಂದೂ-ಮುಸ್ಲಿಂ ಜೋಡಿಯನ್ನು, ಮತ್ತೆ ಕುಮಾರಧಾರಾ ಬಳಿ ಕಂಡಾಗ ಒಂದು ಗುಂಪು ಹುಡುಗನ ಮೇಲೆರಗಿ ಹಲ್ಲೆ ಮಾಡಿದೆ.
ಹಲ್ಲೆಗೊಳಗಾದ ಯುವಕ ಕಲ್ಲುಗುಂಡಿಯ ಅಫೀದ್ ಎಂದು ತಿಳಿದು ಬಂದಿದೆ. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆಗೈದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿ ಅಪ್ರಾಪ್ತ ವಯಸ್ಕಳಾಗಿದ್ದು, ಆಕೆಯ ತಂದೆಯೂ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಯುವಕನ ವಿರುದ್ಧ ಪೊಲೀಸರು ಪೋಸ್ಕೋ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.