

ವಾಷಿಂಗ್ಟನ್: ಒಂದು ವೇಳೆ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಗೆದ್ದರೆ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಎದುರಾಳಿ ಬಿಡೆನ್ ಅವರು ತಿರುಗೇಟು ನೀಡಿದ್ದಾರೆ.
ಒಂದು ವೇಳೆ ಟ್ರಂಪ್ ತಮ್ಮ ಬೆದರಿಕೆಯಂತೆ ನಡೆದುಕೊಂಡರೆ ನಮ್ಮ ಬಳಿಯು ಸಹ ಕಾನೂನು ತಂಡಗಳು ತಯಾರಿಯಲ್ಲಿವೆ. ಮತ ಎಣಿಕೆಯನ್ನು ನಿಲ್ಲಿಸುವ ಯತ್ನಕ್ಕೆ ಟ್ರಂಪ್ ಅವರು ಕೈಹಾಕಿದರೆ, ನಾವು ಸಹ ಅದಕ್ಕೆ ಪ್ರತಿರೋಧ ಒಡ್ಡಲು ಕಾನೂನು ತಂಡವನ್ನು ತಯಾರಿಯಲ್ಲಿ ಇಟ್ಟಿದ್ದೇವೆಂದು ಬಿಡೆನ್ ಕ್ಯಾಂಪೇನ್ ಮ್ಯಾನೇಜರ್ ಜೆನ್ ಒ ಮಲ್ಲೆ ಡಿಲ್ಲನ್ ತಿರುಗೇಟು ನೀಡಿದ್ದಾರೆ.
ಇದಕ್ಕೂ ಮುನ್ನ ಶ್ವೇತಭವನದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವೇ ಗೆಲ್ಲುವುದು. ಆದರೆ ಎಲ್ಲಿಯೋ ಮೋಸದ ಸುಳಿವು ಸಿಗುತ್ತಿಲ್ಲ, ಹೀಗಾಗಲು ತಾವು ಬಿಡುವುದಿಲ್ಲ ಎಂದಿದ್ದಾರೆ.
ಬಿಡೆನ್ ಅವರು 238 ಎಲೆಕ್ಟ್ರೋಲ್ ಮತಗಳನ್ನು ಪಡೆದರೆ, ಟ್ರಂಪ್ 213 ಮತಗಳೊಂದಿಗೆ ಹಿನ್ನೆಡೆ ಅನುಭವಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಲು 538 ಮತಗಳ ಪೈಕಿ ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯ ಇದೆ.
ಫಲಿತಾಂಶದಲ್ಲಿ ಹಿನ್ನಡೆ ಅನುಭವಿಸಿರುವ ಡೋನಾಲ್ಡ್ ಟ್ರಂಪ್ ಅವರು ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಮೋಸ ನಡೆದಿದ್ದು, ಅಮೆರಿಕ ಜನತೆಗೆ ವಂಚನೆ ಎಸಗಲಾಗಿದೆ. ನಾವು ಇದರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)