'ಬೆಥ್​ಲೆಹೆಮ್​'ನಲ್ಲಿಲ್ಲ ಕ್ರಿಸ್‌ಮಸ್ ಸಡಗರ..!'ಪ್ರೇತ'ನಗರಿಯಂತಾಯ್ತು ಕ್ರಿಸ್ತ ಜನ್ಮಭೂಮಿ?

Bethlehem
Published on

ಬೆಥ್ ಲೆಹೆಮ್ : ಲಕ್ಷಾಂತರ ಮಂದಿ ಪ್ರಯಾಣಿಕರು, ವಿದ್ಯುತ್​ ದೀಪಾಲಂಕಾರ, ಯಾವ ರಸ್ತೆಯಲ್ಲಿ ನೋಡಿದರೂ ಅಂಗಡಿ-ಮುಂಗಟ್ಟುಗಳು, ಪಟಾಕಿ, ಭೂಮಿ ಮತ್ತು ಆಗಸದಲ್ಲಿ ಬಾಣ-ಬಿರುಸುಗಳ ಸದ್ದು ಮತ್ತು ಬಣ್ಣದ ಚಿತ್ತಾರ..ಹೀಗೆ ಒಂದೇ ಎರಡೇ..ಹೌದು, ಇದು ಶಾಂತಿಧೂತ ಏಸುಕ್ರಿಸ್ತನ ಜನ್ಮಸ್ಥಳದಲ್ಲಿ ಪ್ರತಿವರ್ಷ ಕಂಡು ಬರುತ್ತಿದ್ದ ದೃಶ್ಯಗಳು. ಆದರೆ ಈಗ ವಿಶ್ವದ ಈ ಪ್ರಮುಖ ಧಾರ್ಮಿಕ ಯಾತ್ರಾಸ್ಥಳ ತನ್ನ ವೈಭವ ಕಳೆದುಕೊಂಡು "ಭೂತದ ನಗರಿ"ಯಾಗಿ ಮಾರ್ಪಟ್ಟಿದೆ.

ಪ್ಯಾಲೇಸ್ತೇನ್​ನ ಪಶ್ಚಿಮ ದಂಡೆಯಲ್ಲಿರುವ ದಕ್ಷಿಣ ಜೆರುಸಲೆಮ್ ನ ಈ ಪುರಾತನ ಪಟ್ಟಣ ಬೆಥ್ ಲೆಹೆಮ್ ನಲ್ಲಿ ಕ್ರಿಸ್‌ಮಸ್ ಸಂದರ್ಭಕ್ಕೆ ಹಬ್ಬದ ಸಡಗರ ಮತ್ತು ಜಾತ್ರೆಯ ಜೋಷ್​ ಮನೆ ಮಾಡಬೇಕಿತ್ತು. ಪ್ರತಿವರ್ಷ ಲಕ್ಷಾಂತರ ಮಂದಿ ಆಸ್ತೀಕ ಮಹಾಶಯರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದ ಈ ನಗರಿ ಇಸ್ರೇಲ್-ಹಮಾಸ್ ಯುದ್ಧದ ನಡುವೆ ನಲುಗಿಹೋಗಿದೆ.

ಯುದ್ಧದ ಕಾರಣದಿಂದಾಗಿ ಬೆಥ್ ಲೆಹೆಮ್‌ನಲ್ಲಿ ಕ್ರಿಸ್‌ಮಸ್ ಈವ್ ಆಚರಣೆಗಳನ್ನು ರದ್ದುಗೊಳಿಸಸಲಾಗಿದೆ. ಕ್ರಿಸ್ತ ಜನ್ಮಸ್ಥಾನದ ಸುತ್ತ ಮುಳ್ಳುತಂತಿಯ ಬೇಲಿ ಹಾಕಲಾಗಿದೆ. ಕ್ರಿಸ್‌ಮಸ್ ಸಂದರ್ಭ ಸಾಮಾನ್ಯವಾಗಿ ನಗರದೆಲ್ಲೆಡೆ ಕಾಣುತ್ತಿದ್ದ ಸ್ಟಾರ್​ ವಿದ್ಯುತ್ ದೀಪಗಳು, ಬಣ್ಣಬಣ್ಣದ ಬಣ್ಣದ ಪಟಾಕಿಗಳ ಸದ್ದು ಈ ಬಾರಿ ಪ್ರತಿಫಲಿಸುತ್ತಿಲ್ಲ. ಎತ್ತ ನೋಡಿದರೂ ಮುರಿದು ಬಿದ್ದ ಮನೆಗಳು, ಕಲ್ಲುಮಣ್ಣಿನ ರಾಶಿ ಗೋಚರವಾಗುತ್ತಿದೆ.

ನಗರದ ಮ್ಯಾಂಗರ್ ಸ್ಕ್ವೇರ್ ಅನ್ನು ಅಲಂಕರಿಸುವ ಹಬ್ಬದ ದೀಪಗಳು ಮತ್ತು ಕ್ರಿಸ್‌ಮಸ್ ಟ್ರೀ ಕಾಣೆಯಾಗಿದೆ, ಹಾಗೆಯೇ ರಜಾದಿನವನ್ನು ಗುರುತಿಸಲು ಪ್ರತಿ ವರ್ಷ ವೆಸ್ಟ್ ಬ್ಯಾಂಕ್ ಟೌನ್‌ನಲ್ಲಿ ಸೇರುವ ವಿದೇಶಿ ಪ್ರವಾಸಿಗರು ಮತ್ತು ಯುವಕರ ಮೆರವಣಿಗೆ ಗುಂಪುಗಳು ಅದಕ್ಕೆ ಬ್ಯಾಂಡ್‌ ಸೆಟ್​ಗಳ ಮೆರಗು ಕಾಣೆಯಾಗಿದೆ. ಹತ್ತಾರು ಭದ್ರತಾ ಪಡೆ ತಂಡಗಳು ಖಾಲಿ ಚೌಕದಲ್ಲಿ ಗಸ್ತು ತಿರುಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

"ಈ ವರ್ಷ, ಕ್ರಿಸ್‌ಮಸ್ ಟ್ರೀ ಇಲ್ಲ, ಜಗಮಗಿಸುವ ವಿದ್ಯುತ್​ ದೀಪಗಳಿಲ್ಲ, ಕ್ರಿಸ್‌ಮಸ್ ಆಚರಿಸಲು ಜನರೂ ಬರುತ್ತಿಲ್ಲ, ಕೇವಲ ಕತ್ತಲೆ ಆವರಿಸಿದೆ" ಎಂದು ಆರು ವರ್ಷದಿಂದ ಜೆರುಸಲೆಮ್​ನಲ್ಲಿ ವಾಸಿಸುತ್ತಿದ್ದ ವಿಯೆಟ್ನಾಂನ ಫ್ರಾನ್ಸಿಸ್ಕನ್ ಸಹೋದರ ಜಾನ್ ವಿನ್ ಹೇಳಿದರು.

ಇನ್ನು ಕ್ರಿಸ್‌ಮಸ್ ರದ್ದತಿಯು ಪಟ್ಟಣದ ಆರ್ಥಿಕತೆಗೆ ತೀವ್ರ ಹೊಡೆತ ನೀಡಿದೆ. ಪ್ರವಾಸೋದ್ಯಮವು ಬೆಥ್ ಲೆಹೆಮ್‌ನ ಆದಾಯದ ಅಂದಾಜು ಶೇ.70 ರಷ್ಟಿದ್ದು, ಈ ಬಾರಿ ಪ್ರಮುಖ ವಿಮಾನಯಾನ ಸಂಸ್ಥೆಗಳು ಇಸ್ರೇಲ್‌ಗೆ ವಿಮಾನಗಳನ್ನು ರದ್ದುಗೊಳಿವೆ. ಕೆಲವು ವಿದೇಶಿಗರು ಮಾತ್ರ ಭೇಟಿ ನೀಡುತ್ತಿದ್ದು, 70 ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಸಾವಿರಾರು ಜನರು ನಿರುದ್ಯೋಗಿಗಳಾಗಿದ್ದಾರೆ. ಗಿಫ್ಟ್ ಶಾಪ್‌ಗಳು ತೆರೆಯುತ್ತಿಲ್ಲ. ಒಟ್ಟಾರೆ ಸಡಗರವೇ ತುಂಬಿ ತುಳುಕುತ್ತಿದ್ದ ಮಯಾನಗರಿ ಈಗ ಭೂತಗಳ ವಾಸಸ್ಥಾನದಂತೆ ಗೋಚರಿಸುತ್ತಿರುವುದು ವಿಪರ್ಯಾಸವೇ ಸರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net