ದೊಡ್ಡ​ ಯೂಟ್ಯೂಬರ್ ಆಗುವ ಗುರಿ ಹೊಂದಿದ್ದ ಬಾಲಕ ಇಸ್ರೇಲ್​ ದಾಳಿಗೆ ಬಲಿ: ಸತ್ತ ನಂತ್ರ ನನಸಾಯ್ತು ಕನಸು

Avni Eldus
Published on

ಜೆರುಸಲೆಂ: ತಾನೊಬ್ಬ ದೊಡ್ಡ ಯೂಟ್ಯೂಬರ್​ ಆಗಬೇಕೆಂಬ ಕನಸು ಹೊತ್ತಿದ್ದ ಪ್ಯಾಲೆಸ್ತೀನ್​ ಮೂಲದ 13 ವರ್ಷದ ಅವ್ನಿ ಎಲ್ಡಸ್,​ ಗಾಜಾ ಮೇಲೆ ಇಸ್ರೇಲ್​ ನಡೆಸಿದ ವಾಯುದಾಳಿಯಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಮನಕಲಕುವ ಸಂಗತಿ ಏನೆಂದರೆ, ಎಲ್ಡಸ್​ ಸಾವಿನ ಬಳಿಕ ಆತನ 1 ಮಿಲಿಯನ್​ ಸಬ್​ಸ್ಕ್ರೈಬರ್​ ಕನಸು ನನಸಾಗಿದೆ. ಆದರೆ, ಅದನ್ನು ಅನುಭವಿಸಲು ಆತನೇ ಇಲ್ಲ.

ಎಲ್ಡಸ್​ ಸಾವಿನ ಸುದ್ದಿ ಕೇಳಿ ಜನರು ಆತನ ಯೂಟ್ಯೂಬ್​ ಚಾನೆಲ್​ ಅನ್ನು ಸಬ್​ಸ್ಕ್ರೈಬ್​ ಆಗುವ ಮೂಲಕ ಆತನ ಕನಸನ್ನು ನನಸು ಮಾಡಿದ್ದಾರೆ. ಸದ್ಯ ಎಲ್ಡಸ್​ ಯೂಟ್ಯೂಬ್​ ಚಾನೆಲ್​ 1.49 ಮಿಲಿಯನ್​ ಸಬ್​ಸ್ಕ್ರೈಬರ್​ ಹೊಂದಿದ್ದು, ಅದರ ಖುಷಿಯನ್ನು ಅನುಭವಿಸಲು ಬಾಲಕನೇ ಇಲ್ಲ. ಎಲ್ಡಸ್​ ಸಾವಿಗೆ ಸಾಕಷ್ಟು ಮಂದಿ ಸಂತಾಪ ಸೂಚಿಸುತ್ತಿದ್ದಾರೆ.

ಕಂಪ್ಯೂಟರ್ಸ್​ ಮತ್ತು ಗೇಮಿಂಗ್ ಮೇಲಿನ ತಮ್ಮ ಪ್ರೀತಿಗೆ ಹೆಸರುವಾಸಿಯಾಗಿದ್ದ ಎಲ್ಡಸ್, ಕಳೆದ ವರ್ಷ ಆಗಸ್ಟ್‌ನಲ್ಲಿ ತಮ್ಮ ಚಾನಲ್ 1,000 ಚಂದಾದಾರರನ್ನು ಪೂರೈಸಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು ಮತ್ತು ತನ್ನ ಅಂತಿಮ ಗುರಿ ಏನು ಎಂಬುದನ್ನು ವಿವರಿಸಿದ್ದರು. ನಾನು ಅವ್ನಿ ಎಲ್ಡಸ್, ಪ್ಯಾಲೆಸ್ತೀನ್​ನ ಗಾಜಾದವನು. ನನಗೆ 12 ವರ್ಷ ಎಂದು ವೀಡಿಯೊದಲ್ಲಿ ಹೇಳಿದ್ದನು. ನನ್ನ ಈ ಚಾನಲ್‌ನ ಗುರಿ ಮೊದಲು 1,00,000 ಚಂದಾದಾರರನ್ನು ತಲುಪುವುದು. ಆ ಬಳಿಕ 5,00,000, ನಂತರ 1 ಮಿಲಿಯನ್ ತಲುಪುವುದೇ ನನ್ನ ಕನಸು. ದೇವರ ಇಚ್ಛೆ ಮತ್ತು ನಿಮ್ಮ ಬೆಂಬಲ, ಪ್ರೀತಿಯಿದ್ದರೆ 10 ಮಿಲಿಯನ್ ಚಂದಾದಾರರನ್ನು ತಲುಪುತ್ತೇನೆ ಎಂದಿದ್ದನು.

ಇದೀಗ ಕಾಮೆಂಟ್‌ಗಳ ವಿಭಾಗದಲ್ಲಿ ಹಲವಾರು ಬಳಕೆದಾರರು ಸಂತಾಪವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಎಲ್ಡಸ್ ಅವರು ಜೀವಂತವಾಗಿರುವಾಗ ಅವರ ಗುರಿಯನ್ನು ಸಾಧಿಸಲು ಸಾಧ್ಯವಾಗದಿದ್ದಕ್ಕೆ ಕ್ಷಮೆಯನ್ನೂ ಕೋರಿದ್ದಾರೆ. ಈ ಒಂದು ಕ್ಷಣ ನಿಜಕ್ಕೂ ಭಾವನಾತ್ಮಕವಾಗಿದೆ. ಅಕ್ಟೋಬರ್ 7ರಂದು ಇಸ್ರೇಲಿ ಪಡೆ ನಡೆಸಿದ ದಾಳಿಯಲ್ಲಿ ಎಲ್ಡಸ್​ ಅವರ ಮನೆಗೆ ಹಾನಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಎಲ್ಡಸ್​ ಅವರ ಚಿಕ್ಕಮ್ಮ ಮಾತನಾಡಿದ್ದು, ಆತ ಆತ್ಮವಿಶ್ವಾಸ ಮತ್ತು ಇತರರಿಗೆ ಸಹಾಯ ಮಾಡುವ ಗುಣ ಹೊಂದಿದ್ದಂತಹ ಹುಡುಗ, ತನಗಾಗಿ ಬಾಗಿಲು. ಕಂಪ್ಯೂಟರ್ ಮೇಲಿನ ಆತನ ಪ್ರೀತಿಯಿಂದಾಗಿ ಕುಟುಂಬದದಲ್ಲಿ ಆತನನ್ನು "ಇಂಜಿನಿಯರ್ ಅವ್ನಿ" ಎಂದು ಕರೆಯುತ್ತಿದ್ದರು ಎಂದಿದ್ದಾರೆ. ಎರಡು ಬಾಂಬ್‌ಗಳು ಏಕಾಏಕಿ ಕಟ್ಟಡದ ಮೇಲೆ ಬಿದ್ದು ನಾಶ ಮಾಡಿದವು. ನಾವು ಮೇಲಿನ ಮಹಡಿಯಲ್ಲಿ ಉಳಿದುಕೊಂಡಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಬದುಕುಳಿದೆವು. ಆದರೆ, ಅವ್ನಿ ಸೇರಿದಂತೆ ಅವರ ಕುಟುಂಬ ದುರಂತ ಸಾವಿಗೀಡಾಯಿತು ಎಂದು ಅವ್ನಿಯ ಚಿಕ್ಕಪ್ಪ ಮೊಹಮ್ಮದ್ ಹೇಳಿದರು.

ನಮಗಾಗಲಿ ಮತ್ತು ನೆರೆಹೊರೆಯವರಾಗಲಿ ದಾಳಿಯ ಬಗ್ಗೆ ಯಾವುದೇ ಎಚ್ಚರಿಕೆಯನ್ನು ನೀಡಲಿಲ್ಲ. ಇದ್ದಕ್ಕಿದ್ದಂತೆ ಸ್ಫೋಟವಾಯಿತು. ಆ ರಾತ್ರಿ ನನ್ನ ಕುಟುಂಬದ 15 ಸದಸ್ಯರು ಕೊಲ್ಲಲ್ಪಟ್ಟರು ಮತ್ತು ಅವರಲ್ಲಿ ಅವ್ನಿ ಕೂಡ ಒಬ್ಬ ಎಂದು ಮೊಹಮ್ಮದ್ ತಿಳಿಸಿದರು.

ಅಕ್ಟೋಬರ್ 7ರಂದು ಆರಂಭವಾದ ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಈವರೆಗೂ ಗಾಜಾದಲ್ಲಿ 10,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಕನಿಷ್ಠ 4,000 ಮಕ್ಕಳು ಎಂಬುದು ಆಘಾತಕಾರಿ ಸಂಗತಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net