More

    ಶಂಕಿತ ಉಗ್ರರಿಗೆ ವಿದೇಶಿ ಹಣ: ವಿಚಾರಣೆ ವೇಳೆ ಅಕ್ರಮ ಹಣಕಾಸು ವಹಿವಾಟು ಬೆಳಕಿಗೆ

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಭಾರತದಲ್ಲಿ ಉಗ್ರ ಕೃತ್ಯವೆಸಗಲು ಸಂಚು ರೂಪಿಸುತ್ತಿರುವ ಜಾಲಗಳನ್ನು ಪತ್ತೆಹಚ್ಚಿ ಶಂಕಿತರನ್ನು ಬೇಟೆಯಾಡುವ ಕೆಲಸವನ್ನು ಎನ್​ಐಎ ಮುಂದುವರಿಸಿರುವ ಬೆನ್ನಲ್ಲೇ, ಭಯೋತ್ಪಾದಕ ಕೃತ್ಯಗಳಿಗೆ ಬೇಕಾದ ಆರ್ಥಿಕ ನೆರವು ಗಲ್ಪ್ ರಾಷ್ಟ್ರಗಳಿಂದ ಬರುತ್ತಿರುವ ಸಂಗತಿ ಎನ್​ಐಎ ಹಾಗೂ ಇಡಿ (ಜಾರಿ ನಿರ್ದೇಶನಾಲಯ) ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಏತನ್ಮಧ್ಯೆ ಈ ವರ್ಷ ಮಾರ್ಚ್​ನಲ್ಲಿ ಕೋಲ್ಕತ್ತಾದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರು ‘ಖಲೀಫತ್’ ಸ್ಥಾಪನೆಗಾಗಿ ಭಾರತದ ವಿರುದ್ಧ ಯುದ್ಧ ಸಾರಿರುವ ಸಂಗತಿಯನ್ನು ಬಾಯ್ಬಿಟ್ಟ ನಂತರವೇ ಎನ್​ಐಎ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಸಂಘಟನೆಯಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದ, ಕರ್ನಾಟಕ ಘಟಕದ ಜತೆ ನಂಟು ಹೊಂದಿದ್ದ ಇಬ್ಬರು ಸೇರಿ ಐವರು ಶಂಕಿತ ಉಗ್ರರನ್ನು ಡಿ.22ರಂದು ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದಕ್ಕೂ ಮೊದಲು ಈ ಐವರು ಶಂಕಿತರನ್ನು ಎನ್​ಐಎ ಬಂಧಿಸಿ, ವಿಚಾರಣೆ ಮುಗಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಬಳಿಕ ಇಡಿ ಅಧಿಕಾರಿಗಳು 6 ದಿನ ಕಸ್ಟಡಿಗೆ ಪಡೆದಿದ್ದಾರೆ. ಬಂಧಿತರು ಭಾರತ ಹಾಗೂ ವಿದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹ ಮಾಡಿದ್ದರು. ಇದೇ ಹಣವನ್ನು ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಬಳಸುತ್ತಿದ್ದರು.

    ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿರುವ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಹಾಗೂ ಅಲ್ಲಿಂದ ನಗದು ರೂಪದಲ್ಲಿ ಡ್ರಾ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹವಾಲಾ ದಂಧೆಯ ಮೂಲಕ ಹಣ ಬಂದಿದೆ. ಇದೇ ಕಾರಣಕ್ಕೆ ಪಿಎಫ್​ಐ ಸಂಘಟನೆಗೆ ಎಲ್ಲೆಲ್ಲಿಂದ ದೇಣಿಗೆ ಬಂದಿದೆ ಎಂಬುದರ ಬಗ್ಗೆಯೂ ಇಡಿ ಸಮಗ್ರ ತನಿಖೆ ನಡೆಸುತ್ತಿದೆ.

    2023ರ ಜ.6ರಂದು ಕೋಲ್ಕತ್ತಾದಲ್ಲಿ ಸಿಕ್ಕಿಬಿದ್ದಿದ್ದ ಮೊಹಮದ್ ಸದ್ದಾಂ ಅಲಿಯಾಸ್ ಅಬ್ದುಲ್ ಮಲ್ಲಿಕ್ ಹಾಗೂ ಸೈಯದ್ ಅಹಮದ್​ನ ವಿಚಾರಣೆಯಲ್ಲಿ ಉಗ್ರರು ಭಾರತದ ವಿರುದ್ಧ ಸಮರ ಸಾರಿರುವ ವಿಚಾರ ಬಯಲಾಗಿತ್ತು. ಇವರಿಬ್ಬರು ಸಭೆ ಮಾಡಲು ಬೈಕ್​ನಲ್ಲಿ ಹೋಗುತ್ತಿದ್ದಾಗಲೇ ಕೋಲ್ಕತ್ತಾದ ಹೌರಾ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ದೇಶದ ಪ್ರತಿಷ್ಠಿತ ಕಂಪನಿಗಳು ಹಾಗೂ ಜಿಹಾದಿ ಚಾನಲ್​ಗಳು ಸೇರಿ ವಿವಿಧ ಮಾಧ್ಯಮಗಳ ಹೆಸರುಗಳನ್ನು ಇಂಗ್ಲಿಷ್​ನಲ್ಲಿ ಬರೆದಿಟ್ಟುಕೊಂಡಿದ್ದ ದಾಖಲೆಗಳು ಹಾಗೂ ನಗದು ಪತ್ತೆಯಾಗಿತ್ತು. ಭಾರತ ಸರ್ಕಾರದ ವಿರುದ್ಧ ಸಮರ ಸಾರಿದ್ದರ ಭಾಗವಾಗಿ ಯುವಕರ ಬ್ರೖೆನ್​ವಾಷ್ ಮಾಡಿ ಸಂಘಟನೆಗೆ ಸೇರಿಸುವುದು, ಶಸ್ತ್ರಾಸ್ತ್ರ ಸಂಗ್ರಹ, ಸ್ಪೋಟಕ ವಸ್ತುಗಳ ತಯಾರಿಕೆ ಹಾಗೂ ಇದಕ್ಕೆ ಬೇಕಾದ ಹಣ ಸಂಗ್ರಹ ಮಾಡುತ್ತಿದ್ದರೆಂಬ ವಿಚಾರವನ್ನು ಎನ್​ಐಎ ದಾಖಲಿಸಿರುವ ಎಫ್​ಐಆರ್​ನಲ್ಲಿ ವಿವರಿಸಲಾಗಿದೆ.

    ವಿವಿಧ ರಾಜ್ಯಗಳಲ್ಲಿ ಮಾಡ್ಯುಲ್!
    ಉಗ್ರ ಕೃತ್ಯವೆಸಗಲು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಂದೊಂದು ಮಾಡ್ಯುಲ್ (ಘಟಕ) ಸ್ಥಾಪನೆ ಮಾಡಿ ಅದಕ್ಕೊಬ್ಬ ಮುಖ್ಯಸ್ಥರನ್ನು ನೇಮಕಗೊಳಿಸಿದ್ದರು. ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಬಳ್ಳಾರಿಯ ಮಾಡ್ಯುಲ್ ಅನ್ನು ಎನ್​ಐಎ ಭೇದಿಸಿತ್ತು. ಮಹಾರಾಷ್ಟ್ರದಲ್ಲಿ 15 ಹಾಗೂ ಕರ್ನಾಟಕದಲ್ಲಿ 8 ಶಂಕಿತ ಉಗ್ರರನ್ನು ಎನ್​ಐಎ ಬಂಧಿಸಿತ್ತು. ದೇಶದಲ್ಲಿ ಶಾಂತಿ ಕದಡಿ ಕೋಮು ಸೌಹಾರ್ದಕ್ಕೆ ಧಕ್ಕೆ ತರಲು ಸಂಚು ರೂಪಿಸಿದ್ದ ವಿಚಾರ ತನಿಖೆಯಲ್ಲಿ ದೃಢಪಟ್ಟಿದೆ.

    ವಿಮೋಚನಾ ವಲಯ!
    ಮಹಾರಾಷ್ಟ್ರದ ಥಾಣೆ ಗ್ರಾಮಾಂತರದಲ್ಲಿರುವ ಪಾದ್ಘಾ ಗ್ರಾಮವನ್ನು ವಿಮೋಚನಾ ವಲಯ ಎಂದು ಐಸಿಸ್ ಶಂಕಿತರು ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಅಲ್ಲದೆ ಆ ಗ್ರಾಮವನ್ನು ‘ಅಲ್ ಶಮ್ ಎಂದು ಕರೆದುಕೊಂಡಿದ್ದರು. ಇದೇ ರೀತಿ ಬಳ್ಳಾರಿಯಲ್ಲೂ ಪ್ರತ್ಯೇಕ ಐಸಿಸ್ ಘಟಕವನ್ನು ಸ್ಥಾಪಿಸಿಕೊಂಡಿದ್ದ ಸಂಗತಿ ಎನ್​ಐಎ ತನಿಖೆಯಲ್ಲಿ ಗೊತ್ತಾಗಿತ್ತು.

    * ಕೋಲ್ಕತ್ತಾದಲ್ಲಿ ಸಿಕ್ಕಿಬಿದ್ದ ಇಬ್ಬರು ಶಂಕಿತರು ಬಾಯ್ಬಿಟ್ಟ ಸತ್ಯ

    * ‘ಖಲೀಫತ್’ ಸ್ಥಾಪನೆಗಾಗಿ ಭಾರತದ ವಿರುದ್ಧ ಯುದ್ಧ ಸಾರಿದ್ದ ಸಂಗತಿ ಬಯಲು

    * ಕರ್ನಾಟಕ ಸೇರಿ ಬೇರೆಬೇರೆ ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗೆ ಪ್ರತ್ಯೇಕ ಘಟಕ

    ತನಿಖೆಯಲ್ಲಿ ಗೊತ್ತಾಗಿದ್ದೇನು?

    * ಸ್ಪೋಟಕಕ್ಕೆ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ, ಇದನ್ನು ಬಳಸಿಕೊಂಡು ಸುಧಾರಿತ ಸ್ಪೋಟಕ ತಯಾರಿಸಿ, ಉಗ್ರ ಕೃತ್ಯವೆಸಗುವುದು.

    * ಹಿಂಸಾತ್ಮಾಕ ಜಿಹಾದ್, ಖಲೀಫತ್, ಐಸಿಸ್ ಮಾರ್ಗಗಳನ್ನು ಅನುಸರಿಸಿ ಭಯೋತ್ಪಾದಕ ಕೃತ್ಯವೆಸಗುವುದು.

    * ಸಮಾಜದ ಯುವಕರ ಮನಃಪರಿವರ್ತಿಸಿ, ಉಗ್ರ ಸಂಘಟನೆಗೆ ಸೇರಿಸುವುದು. ವಿದೇಶಿ ಉಗ್ರರ ಜತೆ ಸಂಪರ್ಕ, ಅಲ್ಲಿಂದಲೇ ಆರ್ಥಿಕ ನೆರವು.

    ಕಣ್ಣಿಗೊಂದು ಸವಾಲ್​: ಈ ಫೋಟೋದಲ್ಲಿರುವ ನಾಯಿಯನ್ನು ಪತ್ತೆಹಚ್ಚಿದ್ರೆ ನಿಮಗೆ ನೀವೇ ಸಾಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts