

ಮುಂಬೈ: ಪೊಲೀಸರು ಜನನಿಬಿಡ ಪ್ರದೇಶಗಳಲ್ಲಿ ಅಣಕು ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಿರುತ್ತಾರೆ. ಆದರೆ, ಕೆಲವೊಮ್ಮೆ ಜನ ಇದನ್ನು ನಿಜ ಎಂದು ಭಾವಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಅನೇಕ ಉದಾಹರಣೆಗಳು ಸಹ ಇವೆ.
ಇದೀಗ ಘಟನೆಯೊಂದರಲ್ಲಿ ಪೊಲೀಸರು ಭಯೋತ್ಪಾದನೆ ನಿಗ್ರಹದ ಕುರಿತು ಮಾಡಿದ ಒಂದು ಅಣಕು ಕಾರ್ಯಾಚರಣೆ ಅವರ ಪಾಲಿಗೆ ಮುಳುವಾಗಿರುವ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ ಅಧಿಕಾರಿ ಮೇಲೆ ವ್ಯಕ್ತಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿರುವ ದೇವಸ್ಥಾನ ಒಂದರಲ್ಲಿ ಭಾನುವಾರ ಭಕ್ತರ ಸಂಖ್ಯೆ ಹೆಚ್ಚಿದ್ದ ಕಾರಣ ಪೊಲೀಸರು ಭಯೋತ್ಪಾದನೆ ನಿಗ್ರಹದ ಕುರಿತು ಅಣಕು ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದರು. ಅದರಂತೆ ಅಲ್ಲಿರುವವರಿಗೆ ಯಾವುದೇ ಮುನ್ಸೂಚನೆಯನ್ನು ನೀಡದೆ ಏಕಾಏಕಿ ಅಣಕು ಕಾರ್ಯಾಚರಣೆಯನ್ನೂ ಆರಂಭಿಸಿದ್ದಾರೆ.
ಭಯೋತ್ಪಾದಕನ ವೇಷ ತೊಟ್ಟಿದ್ದ ಇಬ್ಬರು ಅಧಿಕಾರಿಗಳು ಶಸ್ತ್ರಸಜ್ಜಿತವಾಗಿ ದೇವಸ್ಥಾನ ಪ್ರವೇಶಿಸಿದ್ದಾರೆ. ಮಾರುವೇಷದಲ್ಲಿದ್ದ ಅಧಿಕಾರಿಗಳನ್ನು ಕಂಡು ಒಂದು ಕ್ಷಣಕ್ಕೆ ಭಯಬೀತರಾದ ಭಕ್ತರು ಮುಂದಕ್ಕೆ ಕದಲದೆ ಅಲ್ಲೇ ನಿಂತು ಬಿಟ್ಟಿದ್ದಾರೆ. ಈ ವೇಳೆ ಭಕ್ತನೋರ್ವ ನಿನಿಗೆ ದೇವಸ್ಥಾನದಲ್ಲಿ ಏನು ಕೆಲಸ ಎಂದು ಹೇಳುತ್ತಾ ಮಾರುವೇಷದಲ್ಲಿದ್ದ ಅಧಿಕಾರಿಗಳ ಕಪಾಳಕ್ಕೆ ಹೊಡೆದು ಪ್ರಶ್ನಿಸಿದ್ದಾನೆ.
ಅಣಕು ಕಾರ್ಯಾಚರಣೆ ಎಂದು ತಿಳಿಯದ ಪ್ರಶಾಂತ್ ಕುಲಕರ್ಣಿ ಎಂಬಾತ ಮಾರುವೇಷದಲ್ಲಿದ್ದ ಅಧಿಕಾರಿಗಳನ್ನು ಕಂಡು ತನ್ನ ಮಗಳು ಅಳಲು ಪ್ರಾರಂಭಿಸಿದ್ದಳು ಎಂಬ ಕಾರಣಕ್ಕೆ ನಿಜವಾದ ಉಗ್ರಗಾಮಿ ಎಂದು ಭಾವಿಸಿ ಹಲ್ಲೆ ನಡೆಸಿದ್ದಾರೆ. ನಿನಗೇನಾದರೂ ತಲೆ ಇದೆಯಾ ದೇವಸ್ಥಾನದಲ್ಲಿ ನಿನಗೇನು ಕೆಲಸ ಎಂದು ಕೂಗಾಡುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಹತ್ತೋಟಿಗೆ ತಂದು ಭಯೋತ್ಪಾದನೆ ನಿಗ್ರಹದ ಕುರಿತು ಮಾಡುತ್ತಿರುವ ಅಣಕು ಕಾರ್ಯಾಚರಣೆ ಎಂದು ಅಲ್ಲಿದ್ದ ಜನತೆಗೆ ತಿಳಿಸಿದ್ದರು. ಭಯೋತ್ಪಾದಕರೆಂದು ಭಾವಿಸಿ ಮಾರುವೇಷದಲ್ಲಿದ್ದವರನ್ನು ಎದುರಿಸಿದ ರೀತಿಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಯೋತ್ಪಾದನಾ ನಿಗ್ರಹದಂತಹ ಕಾರ್ಯಾಚರಣೆಗಳಲ್ಲಿ ಸಾರ್ವಜನಿಕರು ಯಾವ ರೀತಿ ವರ್ತಿಸುತ್ತಾರೆ ಎಂದು ಅಣಕು ಡ್ರಿಲ್ ಮಾಡಲಾಯಿತು. ಒಟ್ಟಿನಲ್ಲಿ ಈ ಅಣಕು ಕಾರ್ಯಾಚರಣೆ ಯಶಸ್ವಿಯಾಗಿದ್ದು, ಜನತೆಯ ಸುರಕ್ಷತೆಯ ಹಿತದೃಷ್ಟಿಯಿಂದ ಈ ರೀತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರಶಾಂತ್ ಕುಲಕರರ್ಣಿಯನ್ನು ಹಾಡಿ ಹೊಗಳಿದ್ದರೆ ಇನ್ನು ಕೆಲವರು ಆತ ನಿಜವಾದ ಭಯೋತ್ಪಾದಕ ಆಗಿದ್ದರೆ ಏನು ಕಥೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.