VIDEO| ಟೊಮ್ಯಾಟೋ ಹಾರ ಧರಿಸಿ ಸದನಕ್ಕೆ ಆಗಮಿಸಿದ ಎಎಪಿ ಸಂಸದ; ಕಿಡಿಕಾರಿದ ಸಭಾಪತಿ ಧನಕರ್​

AAP MP
Published on

ನವದೆಹಲಿ: ದೇಶದಲ್ಲಿ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆಯೇರಿಕೆ ಹಾಗೂ ಹಣದುಬ್ಬರುವನ್ನ ಖಂಡಿಸಿ ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸುಶೀಲ್​ ಕುಮಾರ್ ಗುಪ್ತಾ ಟೊಮ್ಯಾಟೋ ಹಾಗೂ ಶುಂಠಿ ಹಾರವನ್ನು ಧರಿಸಿ ಸದನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯಸಭೆಯಲ್ಲಿ ದಾಖಲೆಗಳನ್ನು ಮಂಡಿಸಸುವ ಸಮಯದಲ್ಲಿ ಸಂಸದ ಸುಶೀಲ್​ ಕುಮಾರ್​ ಸದನವನ್ನು ಪ್ರವೇಶಿಸಿದ್ದು, ಇದನ್ನೂ ಕಂಡು ಸಭಾಪತಿ ಜಗದೀಪ್​ ಧನಕರ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮ ಈ ನಡೆ ತುಂಬಾ ನೋವುಂಟು ಮಾಡಿದೆ ಎಂದು ನುಡಿದಿದ್ದಾರೆ.

ಸಭೆಯಲ್ಲಿ ಗದ್ದಲ

ಕಲಾಪದ ವೇಳೆ ಕ್ವಿಟ್​ ಇಂಡಿಯಾ ಚಳುವಳಿಯನ್ನು ಉಲ್ಲೇಖಿಸಿದ ಸಭಾಪತಿ ಧನಕರ್​ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವಂತೆ ಸದಸ್ಯರಿಗೆ ಸೂಚಿಸಿದ್ದಾರೆ. ಇದಾದ ಬಳಿಕ ರಾಜ್ಯಸಭೆಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನೂ ಮಂಡಿಸಲಾಯಿತು.

ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೀವು(ಜಗದೀಪ್​ ಧನಕರ್​) ಕ್ವಿಟ್​​ ಇಂಡಿಯಾ ಚಳುವಳಿಯನ್ನು ಉಲ್ಲೇಖಿಸಿದ್ದೀರಿ. ಅದರಂತೆ ನಾವು ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿದ್ದೆವು. ಆದರೆ, ಕ್ವಿಟ್​ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ಗಾಂಧೀಜಿ ಅವರ ಮೊಮ್ಮಗ ತುಷಾರ್​ ಗಾಂಧಿ ಅವರನ್ನು ಬಂಧಿಸಲಾಗಿದೆ.

ಬೇಸರ ತರಿಸಿದೆ

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಂದಕ್ಕೆ ಮಾತನಾಡಲು ಸಭಾಪತಿಗಳು ಅವಕಾಶ ನಿರಾಕರಿಸಿದ್ದರು. ಇದನ್ನು ಲೆಕ್ಕಿಸದ ಖರ್ಗೆ ತಮ್ಮ ಬಾಷಣವನ್ನೂ ಮುಂದುವರೆಸಿದ್ದರು. ಈ ವೇಳೆ ಕಾಂಗ್ರೆಸ್​ ಹಾಗೂ ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಗದ್ದಲದ ನಡುವೆಯೇ ಸುಶೀಲ್​ ಕುಮಾರ್​ ಗುಪ್ತಾ ಅವರನ್ನು ಗಮನಿಸಿದ ಸಭಾಪತಿ ಧನಕರ್ ಅವರ ನಡೆಗೆ​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಮ್ಮ ನಡವಳಿಕೆ ಬಗ್ಗೆ ನಾವೇ ಒಂದು ಗೆರೆ ಹಾಕಿಕೊಳ್ಳಬೇಕಿದೆ. ಸಭೆಯ ಅಧ್ಯಕ್ಷನಾಗಿ ಸುಶೀಲ್​ ಕುಮಾರ್​ ಗುಪ್ತಾ ಅವರು ಈ ರೀತಿಯ ಹಾರ ಧರಿಸಿ ಸದನಕ್ಕೆ ಬಂದಿರುವುದು ನನಗೆ ತುಂಬಾ ಬೇಸರ ತರಿಸಿದೆ. ಇವರ ಮೇಲೆ ಯಾವ ರೀತಿಯ ಕ್ರಮ ಜರುಗಿಸಬೇಕು ಎಂಬುದರ ಕುರಿತು ನಾನು ಆಡಳಿತ ಹಾಗೂ ವಿಪಕ್ಷ ನಾಯಕರ ಜೊತೆ ಚರ್ಚೆ ನಡೆಸಿ ಆ ನಂತರ ಮಾತನಾಡುತ್ತೇನೆ ಎಂದು ಹೇಳುತ್ತಾ ಗದ್ದಲದ ನಡುವೆಯೇ ಸಭೆಯನ್ನೂ ಮುಂದೂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net