ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ ಸಿದ್ದಕಲೆ ನನಗಂತೂ ಗೊತ್ತಿಲ್ಲ; ಸಿಎಂ ಸಿದ್ದರಾಮಯ್ಯಗೆ ಎಚ್​ಡಿಕೆ ಟಾಂಗ್​

HDK Siddu
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನೂ ಮುಂದುವರೆಸಿರುವ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ. ಇದು ಎಂಥಾ ಮನಃಸ್ಥಿತಿ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಮಾಜಿ ಸಿಎಂ ಎಚ್​ಡಿಕೆ ಭ್ರಷ್ಟಾಚಾರದ ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ ಸಿದ್ದಕಲೆ ನನಗಂತೂ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.

ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ

ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣವರು ಈಗ ಹೊಸ ಜೇಳಿಯೊಂದನ್ನೂ ನೀಡಿದ್ದು, ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದಿದ್ದಾರೆ. ಇದೇ ಕೆಂಪಣ್ಣನವರ 40% ಆರೋಪವನ್ನೇ ಅಸ್ತ್ರ ಮಾಡಿಕೊಂಡು,ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ. ಇದು ಎಂಥಾ ಮನಃಸ್ಥಿತಿ ಇದಕ್ಕೆ ಚಿಕಿತ್ಸೆ ಬೇಡವೇ ಎಂದು ಪ್ರಶ್ನಿಸಿದ್ದಾರೆ.

ಈಗ ವಿಷಯಾಂತರ ಮಾಡಿ, ಕುಮಾರಸ್ವಾಮಿಯ ಟೀಕೆ, ಭಾಷೆ, ಅರೋಪ ಇಟ್ಟುಕೊಂಡು ಅನುಕಂಪ ಗಿಟ್ಟಿಸಲು ಹೊರಟಿದ್ದೀರಿ. ಆದರೆ, ಅನುದಿನವೂ ವರ್ಗಾವಣೆ, ಕಮೀಷನ್ ದಂಧೆಯಲ್ಲಿ ಬೇಯುತ್ತಿರುವವರ ಕರುಣಾಜನಕ ಕಥೆಗಳಿಗೆ ಕೊನೆ ಎಂದು ನಿಮ್ಮ ಹಣದ ಹಪಾಹಪಿ, ಧನಪಿಶಾಚಿ ರಕ್ಕಸತನಕ್ಕೆ ಅಂತ್ಯ ಯಾವಾಗ ಎಂದು ಕಿಡಿಕಾರಿದ್ದಾರೆ.

ಸಿದ್ದಕಲೆ ನನಗಂತೂ ಗೊತ್ತಿಲ್ಲ

ಇಂಥ ಸುಲಿಗೆ ಮನಸ್ಥಿತಿಗೂ ಸೂಕ್ತ ಚಿಕಿತ್ಸೆ ಬೇಡವೇ ಸಿದ್ದರಾಮಯ್ಯನವರೇ ಸರಕಾರಿ ಉದ್ಯೋಗಿಗಳು, ಅವರ ಕುಟುಂಬದವರ ಕಣ್ಣೀರಿನ ಶಾಪ ನಿಮಗೆ ತಟ್ಟದಿರುವುದೇ. ಮಾನಸಿಕ ಸ್ಥಿಮಿತತೆ ಎಂದರೆ ಸರಕಾರಿ ಉದ್ಯೋಗಿಗಳನ್ನು ಕಾಸಿಗಾಗಿ ಎಡೆಬಿಡದೆ ಕಾಡುವುದೇ ಅಥವಾ ನುಡಿದಂತೆ ನಡೆಯುವುದೆಂದರೆ ಇದೇನಾ.

ಭ್ರಷ್ಟಾಚಾರದ ಆರೋಪವನ್ನೇ ಅನುಕಂಪವನ್ನಾಗಿ ಪರಿವರ್ತಿಸಿಕೊಳ್ಳುವ ಸಿದ್ದಕಲೆ ನನಗಂತೂ ಗೊತ್ತಿಲ್ಲ. ಒಂದೇ ಹುದ್ದೆಗೆ ಸಿಎಂ ಕಚೇರಿಯ ಐದಾರು ಟಿಪ್ಪಣಿಗಳು ನಡೆದಂತೆ ಎಲ್ಲವನ್ನೂ ನುಡಿಯುತ್ತಿವೆ ಹಾಗೂ ಆಯ್ದ ಕಿಸೆಗಳನ್ನು ಭರ್ತಿ ತುಂಬುತ್ತಿವೆ. ನಮ್ಮ ಸೋಲಿನ ಆಘಾತ ಇರಲಿ, ನಿಮ್ಮ ಶಾಸಕರ ವರಾತದ ಕಥೆ ಏನು. 36 ಸೀಟು ಎಂದು ಬೀಗುತ್ತಿದ್ದೀರಿ, ಹಣದುಬ್ಬರದಂತೆ ಅತಿ ಉಬ್ಬರವೂ ದೇಶಕ್ಕೆ ಒಳ್ಳೆಯದಲ್ಲ. ಸಭ್ಯ ಭಾಷೆಯಲ್ಲೇ ತಮಗೆ ಹೇಳುತ್ತಿದ್ದೇನೆ. ಅರ್ಥವಾಗಿದೆ ಎಂದು ಭಾವಿಸುತ್ತೇನೆಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯಗೆ ಟಾಂಗ್​ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net