

ನ್ಯೂಯಾರ್ಕ್: ಹಾರಾಟದ ವೇಳೆ ಎರಡು ವಿಮಾನಗಳ (Flight Collision In Air) ನಡುವೆ ಡಿಕ್ಕಿಯಾಗಿರುವ ಘಟನೆ ಟೆಕ್ಸಾಸ್ (Texas)ನ ದಲ್ಲಾಸ್ ಎಕ್ಸಿಕ್ಯೂಟಿವ್ ವಿಮಾನ ನಿಲ್ದಾಣ (Dallas Executive Airport)ದಲ್ಲಿ ಶನಿವಾರ ನಡೆದಿದೆ.
ಬೋಯಿಂಗ್ ಬಿ-17 ಬಾಂಬರ್ (B-17 Bomber) ವಿಮಾನ ಮತ್ತು ಲಘು ವಿಮಾನದ ನಡುವೆ ಡಿಕ್ಕಿ ಸಂಭವಿಸಿದೆ. ವೈಮಾನಿಕ ಪ್ರದರ್ಶನ (US Airshow)ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿದ ಎರಡೂ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿರುವ ದೃಶ್ಯ ವೈರಲ್ ಆಗಿರುವ ವಿಡಿಯೋದಲ್ಲಿದೆ.
ಏರ್ ಶೋ ಆದ್ದರಿಂದ ವಿಮಾನಗಳಲ್ಲಿ ಪೈಲಟ್ಗಳು ಮಾತ್ರ ಇದ್ದರು. ಅವರ ಸ್ಥಿತಿ ಏನಾಗಿದೆ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತಿಳಿಸಿದೆ.
ಏರ್ ಶೋ ನೋಡಲು ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ವಿಮಾನಗಳು ಡಿಕ್ಕಿ ಹೊಡೆಯುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಬಿ-17 ಬಾಂಬರ್ ಹೆಸರಿನ ದೊಡ್ಡ ವಿಮಾನ ನೆಲದಿಂದ ಭಾರೀ ಎತ್ತರಲ್ಲಿ ಹಾರಾಡುತ್ತಿರಲಿಲ್ಲ. ಬೆಲ್ ಪಿ-63 ಕಿಂಗ್‌ಕೋಬ್ರಾ ಹೆಸರಿನ ಲಘು ವಿಮಾನ ಸಹ ಒಂದೇ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಎರಡು ವಿಮಾನಗಳು ತಿರುವು ಪಡೆದುಕೊಳ್ಳುವಾಗ ಡಿಕ್ಕಿ ಹೊಡೆದಿವೆ. ದೊಡ್ಡ ವಿಮಾನದ ಡಿಕ್ಕಿಯ ರಭಸಕ್ಕೆ ಲಘು ವಿಮಾನದ ಆಗಸದಲ್ಲೇ ಪುಡಿ ಪುಡಿಯಾದರೆ, ದೊಡ್ಡ ವಿಮಾನ ನೆಲಕ್ಕೆ ಅಪ್ಪಳಿಸಿದ ತಕ್ಷಣವೇ ಬೆಂಕಿ ಹೊತ್ತಿಕೊಂಡಿತು.
ಸ್ಮರಣಾರ್ಥವಾಗಿ ನಡೆಯುತ್ತಿದ್ದ ಏರ್ ಫೋರ್ಸ್ ವಿಂಗ್ಸ್ ಓವರ್ ಡಲ್ಲಾಸ್ ಪ್ರದರ್ಶನದ ಸಂದರ್ಭದಲ್ಲಿ ಈ ಘರ್ಷಣೆ ಸಂಭವಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ಘಟನೆ ಸಂಬಂಧ ಎಫ್‌ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆ ನಡೆಸುವುದಾಗಿ ತಿಳಿಸಿದೆ.
ಈ ಕುರಿತು ದಲ್ಲಾಸ್ ಮೇಯರ್ ಎರಿಕ್ ಜಾನ್ಸನ್ ಟ್ವೀಟ್ ಮಾಡಿದ್ದು, ನಿಮ್ಮಲ್ಲಿ ಹಲವರು ಈಗ ನೋಡಿರುವಂತೆ, ಇಂದು ನಮ್ಮ ನಗರದಲ್ಲಿ ವೈಮಾನಿಕ ಪ್ರದರ್ಶನದ ವೇಳೆ ಭೀಕರ ದುರಂತ ಸಂಭವಿಸಿದೆ. ಈ ಕ್ಷಣದಲ್ಲಿ ಅನೇಕ ವಿವರಗಳು ತಿಳಿದಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ದಲ್ಲಾಸ್ ಪೊಲೀಸ್ ಇಲಾಖೆಯೊಂದಿಗೆ ಜತೆಗೂಡಿ ಘಟನೆಯ ಬಗ್ಗೆ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಅಂದಹಾಗೆ B-17 ನಾಲ್ಕು ಎಂಜಿನ್‌ಗಳ ಬಾಂಬರ್ ವಿಮಾನವು ಎರಡನೇ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧದ ವಾಯು ಯುದ್ಧವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ. P-63 ಕಿಂಗ್‌ಕೋಬ್ರಾ ವಿಮಾನವು ಬೆಲ್ ಏರ್‌ಕ್ರಾಫ್ಟ್‌ನಿಂದ ಅದೇ ಯುದ್ಧದ ಸಮಯದಲ್ಲಿ ಅಭಿವೃದ್ಧಿಪಡಿಸಿದ ಯುದ್ಧ ವಿಮಾನವಾಗಿದೆ. (ಏಜೆನ್ಸೀಸ್)