

ಲಂಡನ್/ನವದೆಹಲಿ: ಕರೊನಾ ವೈರಸ್ನ ಒಮಿಕ್ರಾನ್ ತಳಿಯ ಜಾಗತಿಕ ಕೇಂದ್ರವಾಗಿ ಮಾರ್ಪಡುತ್ತಿರುವ ಬ್ರಿಟನ್ನಲ್ಲಿ ಈ ಪ್ರಭೇದದ ಹೊಸ ಪ್ರಕರಣ ಮೂರು ಪಟ್ಟು ಹೆಚ್ಚಾಗಿದೆ. 10,000ಕ್ಕೂ ಹೆಚ್ಚು ಪ್ರಕರಣಗಳು ಶನಿವಾರ ದಾಖಲಾಗಿವೆ. ಏಳು ಜನರು ಬಲಿಯಾಗಿದ್ದಾರೆ. ಮುಂದೆ ಪರಿಸ್ಥಿತಿ ಇನ್ನೂ ಅಪಾಯಕಾರಿ ಆಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಎದುರಿಸಲು ಸರ್ಕಾರ ಮುಂದಾಗಿದೆ.
ಭಾನುವಾರ ಬ್ರಿಟನ್ನಲ್ಲಿ 10,259 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಕೇಸ್ನ ಒಟ್ಟು ಸಂಖ್ಯೆ 24,968ಕ್ಕೆ ಏರಿದೆ ಎಂದು ಬ್ರಿಟನ್ ಆರೋಗ್ಯ ಭದ್ರತಾ ಸಂಸ್ಥೆ (ಯುಕೆಎಚ್ಎಸ್ಎ) ತಿಳಿಸಿದೆ. ಒಂದು ದಿನದಲ್ಲಿ ಒಟ್ಟಾರೆ ಕರೊನಾ ವೈರಸ್ನ 90,418 ಕೇಸ್ಗಳು ವರದಿಯಾಗಿದ್ದು ಸೋಂಕಿತರ ಒಟ್ಟು ಸಂಖ್ಯೆ 1,12,79,428ಕ್ಕೆ ಏರಿದೆ. ಈ ಅವಧಿಯಲ್ಲಿ ಸೋಂಕಿನಿಂದ 125 ಜನರು ಮೃತಪಟ್ಟಿದ್ದು ಮರಣದ ಒಟ್ಟು ಸಂಖ್ಯೆ 1,47,173 ಆಗಿದೆ. ಒಮಿಕ್ರಾನ್ ತಳಿ ವೇಗವಾಗಿ ಹರಡುತ್ತಿರುವುದರಿಂದ ಬ್ರಿಟನ್ ರಾಜಧಾನಿ ಗಂಭೀರ ಸ್ಥಿತಿ ಎದುರಿಸಲಿದೆ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಘೋಷಿಸಿದ್ದಾರೆ. ಪ್ರತಿ ದಿನ ಲಕ್ಷಾಂತರ ಜನರು ಒಮಿಕ್ರಾನ್ ಸೋಂಕಿತರಾಗು ವುದು ‘ಬಹುತೇಕ ಖಚಿತ’ ಎಂದು ತುರ್ತಪರಿಸ್ಥಿತಿ ಕುರಿತ ವೈಜ್ಞಾನಿಕ ಸಲಹಾ ಗುಂಪು (ಎಸ್ಎಜಿಇ-ಸೇಜ್) ಎಚ್ಚರಿಕೆ ನೀಡಿದೆ. ಒಂದು ವೇಳೆ ಕಟ್ಟುನಿಟ್ಟಿನ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸದಿದ್ದರೆ ಇಂಗ್ಲೆಂಡ್ನಲ್ಲಿ ದಿನಕ್ಕೆ ಕನಿಷ್ಠ 3,000 ಜನರು ಆಸ್ಪತ್ರೆಗೆ ದಾಖಲಾಗಬೇಕಾಗಬಹುದು ಎಂದು ಹೇಳಿದೆ.
ನ್ಯೂಯಾರ್ಕ್ ದುಃಸ್ವಪ್ನದ ಕೇಂದ್ರ: 2020ರಲ್ಲಿ ಅಮೆರಿಕದಲ್ಲಿ ಕರೊನಾ ಮಹಾಮಾರಿಯ ಕೇಂದ್ರವಾಗಿದ್ದ ನ್ಯೂಯಾರ್ಕ್ನಲ್ಲಿ ಮತ್ತೆ ಅಲೆ ಮರು ಕಳಿಸುವ ಸೂಚನೆಗಳು ಕಾಣಿಸುತ್ತಿವೆ. ಮಹಾನಗರದಲ್ಲಿ ದೈನಿಕ ಪ್ರಕರಣಗಳ ಉಬ್ಬರ ಕಂಡುಬಂದಿದ್ದು, ಸತತ ಎರಡನೇ ದಿನವೂ ಸುಮಾರು 22,000 ಪಾಸಿಟಿವ್ ಕೇಸ್ಗಳು ವರದಿಯಾಗಿವೆ. ಬ್ರೂಕ್ಲಿನ್ನ ಗ್ರೀನ್ಪಾಯಿಂಟ್ ಒಂದರಲ್ಲೇ ಡಜನ್ಗೂ ಹೆಚ್ಚು ರೆಸ್ಟೋರೆಂಟ್ ಮತ್ತು ಬಾರ್ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೋವಿಡ್ ಪರೀಕ್ಷಾ ಕೇಂದ್ರಗಳ ಮುಂದೆ ಜನರು ಉದ್ದನೆಯ ಸಾಲುಗಳಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.
ನೆದರ್ಲೆಂಡ್ ಲಾಕ್ಡೌನ್: ಒಮಿಕ್ರಾನ್ ಪ್ರಭೇದದ ಹಾವಳಿ ಹೆಚ್ಚುತ್ತಿರುವುದರಿಂದ ಯುರೋಪ್ನಾದ್ಯಂತ ಬಿಗಿ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ನಡುವೆ ನೆದರ್ಲೆಂಡ್ ಮತ್ತೆ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದೆ. ಅಗತ್ಯವಲ್ಲದ ಅಂಗಡಿಗಳು, ಬಾರ್, ರೆಸ್ಟೋರೆಂಟ್ಗಳನ್ನು ಭಾನುವಾರದಿಂದ ಜನವರಿ 14ರ ವರೆಗೆ ಮುಚ್ಚುವಂತೆ ಹಂಗಾಮಿ ಪ್ರಧಾನಿ ಮಾರ್ಕ್ ರ್ಯುಟ್ಟೆ ಆದೇಶಿಸಿದ್ದಾರೆ. ಶಾಲೆ, ಕಾಲೇಜ್ ಮತ್ತು ವಿಶ್ವ ವಿದ್ಯಾಲಯಗಳು ಜನವರಿ 9ರ ವರೆಗೆ ಮುಚ್ಚಿರುತ್ತವೆ. ಒಮಿಕ್ರಾನ್ ಇಟಲಿಯಲ್ಲಿ ವೇಗವಾಗಿ ಹರಡುತ್ತಿದೆ. ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ.
ಒಮಿಕ್ರಾನ್ಗೆ ಬೂಸ್ಟರ್ ಡೋಸ್ ಮದ್ದು: ಲಸಿಕೆಯ ಬೂಸ್ಟರ್ ಡೋಸ್ ನೀಡುವುದರಿಂದ ಒಮಿಕ್ರಾನ್ನ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಶೇಕಡ 80ರಷ್ಟು ರಕ್ಷಣೆ ಒದಗಿಸಬಹುದು ಎಂದು ಅಮೆರಿಕದ ಸಂಶೋಧಕರ ತಂಡವೊಂದು ವಿಶ್ವಾಸ ವ್ಯಕ್ತಪಡಿಸಿದೆ. ಆದರೆ, ಬೂಸ್ಟರ್ ಡೋಸ್ ನೀಡುವ ರಕ್ಷಣೆಯು ಕೋವಿಡ್ನ ಹಿಂದಿನ ರೂಪಾಂತರಿಗಳಲ್ಲಿ ಒದಗಿಸಿದ್ದಕ್ಕಿಂತ ಸ್ವಲ್ಪ ಕಡಿಮೆಯಿರುತ್ತದೆ ಎಂದು ಇಂಪೀರಿಯಲ್ ಕಾಲೇಜ್ ಲಂಡನ್ನ ಸಂಶೋಧಕರು ಹೇಳಿದ್ದಾರೆ.
ಲಸಿಕೆ ಪರಿಣಾಮಕಾರಿ: ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದ ಏಳು ತಿಂಗಳ ನಂತರವೂ ಅದರಿಂದ ರಕ್ಷಣೆಯ ಪ್ರಮಾಣ ಅತ್ಯುನ್ನತವಾಗಿದೆ ಎಂಬುದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಲಸಿಕೆ ಪಡೆದವರಲ್ಲಿ ಶೇಕಡ 90ರಷ್ಟು ರಕ್ಷಣೆಯ (ಸೆರೊ) ಪ್ರಮಾಣ ಇರುವುದು 500ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಲ್ಲಿ ನಡೆಸಿದ ವಿಶ್ಲೇಷಣೆಯಿಂದ ದೃಢಪಟ್ಟಿದೆ ಎಂದು ಪುಣೆಯ ಬಿಜೆ ಸರ್ಕಾರಿ ಮೆಡಿಕಲ್ ಕಾಲೇಜ್ ಮತ್ತು ಸಸೂನ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಬಹಳಷ್ಟು ಜನರಿಗೆ ಎರಡನೇ ಡೋಸ್ ಲಸಿಕೆ ಇನ್ನೂ ಸಿಗದಿರುವಾಗ ಬೂಸ್ಟರ್ ಡೋಸ್ ನೀಡಿಕೆ ಈ ಹಂತದಲ್ಲಿ ಅಪೇಕ್ಷಿತವಲ್ಲ ಎಂದು ಆಸ್ಪತ್ರೆಯ ಸಾಮುದಾಯಿಕ ಔಷಧಿ ವಿಭಾಗದ ಡಾ. ಮುರಳೀಧರ ತಾಂಬೆ ಅಭಿಪ್ರಾಯ ಪಟ್ಟಿದ್ದಾರೆ.
ಬ್ರೆಕ್ಸಿಟ್ ಮಂತ್ರಿ ರಾಜೀನಾಮೆ: ಹೊಸ ಕರೊನಾ ನಿಯಂತ್ರಣ ನಿಯಮಗಳಿಗೆ ಆಕ್ರೋಶ ವ್ಯಕ್ತವಾಗಿರುವುದರ ನಡುವೆ, ಹಠಾತ್ ಬೆಳವಣಿಗೆಯೊಂದರಲ್ಲಿ ಬ್ರಿಟನ್ನ ಬ್ರೆಕ್ಸಿಟ್ ಸಚಿವ ಡೇವಿಡ್ ಫ್ರಾಸ್ಟ್ ಶನಿವಾರ ರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ.
ಶೇಕಡ 100 ಲಸಿಕೆ ಸಾಧನೆ: ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಎಲ್ಲ ಅರ್ಹ ವ್ಯಕ್ತಿಗಳಿಗೆ ಕರೊನಾ ಲಸಿಕೆ ನೀಡಲಾಗಿದ್ದು, ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸಲಾಗಿದೆ. ‘ಜಗತ್ತಿನ ತೀರಾ ಒಳನಾಡು ಪ್ರದೇಶಗಳಲ್ಲಿ ಒಂದೆನಿಸಿದ ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಕಷ್ಟಕರ ಸನ್ನಿವೇಶದಲ್ಲಿ ಈ ಅಸಾಮಾನ್ಯ ಸಾಧನೆ ಮಾಡಲಾಗಿದೆ’ ಎಂದು ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.