ಒಮಿಕ್ರಾನ್ ಮಾರಕವಲ್ಲ: ಹೊಸ ಪ್ರಭೇದ ಕುರಿತು ಬ್ರಿಟಿಷ್ ವಿಜ್ಞಾನಿಗಳ ಸಂಶೋಧನೆ..

Omicron
ನವದೆಹಲಿಯಲ್ಲಿ ಸೆಂಟ್ರಲ್ ವೀಸ್ಟಾ ಕಾಮಗಾರಿಯಲ್ಲಿ ತೊಡಗಿರುವ ಸಿಬ್ಬಂದಿಗೆ ಲಸಿಕೆ ನೀಡಿಕೆ.
Published on

ಲಂಡನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕರೊನಾ ವೈರಸ್​ನ ಹೊಸ ಪ್ರಭೇದ ‘ಒಮಿಕ್ರಾನ್’ ಹೆಚ್ಚು ಅಪಾಯಕಾರಿ ಅಲ್ಲ ಎಂದು ಬ್ರಿಟನ್​ನ ಪ್ರಮುಖ ವಿಜ್ಞಾನಿಗಳಲ್ಲೊಬ್ಬರಾದ ಪ್ರೊಫೆಸರ್ ಕ್ಯಾಲಂ ಸೆಂಪಲ್ ಹೇಳಿದ್ದಾರೆ. ಈ ಪ್ರಭೇದಕ್ಕೂ ಲಸಿಕೆಗಳಿಂದ ರಕ್ಷಣೆ ಸಿಗುವ ಸಾಧ್ಯತೆಯಿದೆ ಎಂದು ಬ್ರಿಟನ್ ಸರ್ಕಾರದ ವೈಜ್ಞಾನಿಕ ಸಲಹಾ ಗುಂಪಿನ ಸದಸ್ಯರಾದ ಸೆಂಪಲ್ ಶನಿವಾರ ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಬ್ರಿಟನ್ ಸರ್ಕಾರ ಆಫ್ರಿಕಾದ ಆರು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾ, ಬೋಟ್ಸ್​ವಾನಾ, ಲೆಸೆಥೊ, ಎಸ್ವಾತಿನಿ, ಜಿಂಬಾಬ್ವೆ ಮತ್ತು ನಮೀಬಿಯಾ ಆ ಆರು ದೇಶಗಳು. ಹೊಸ ಪ್ರಭೇದದ ಬಗ್ಗೆ ಹೆಚ್ಚಿನ ವಿವರ ಸಿಗುವವರೆಗೆ ಅತಿಯಾಗಿ ಪ್ರತಿಕ್ರಿಯಿಸದಂತೆ ಡಬ್ಲ್ಯುಎಚ್​ಒ ಸಹಿತ ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಲಸಿಕೆ ಪರಿಣಾಮಕಾರಿ: ಕರೊನಾ ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್ ಜಗತ್ತಿನಲ್ಲಿ ಆತಂಕ ಮೂಡಿಸಿದೆಯಾದರೂ ಈಗ ಬಳಕೆಯಲ್ಲಿರುವ ಕರೊನಾ ಲಸಿಕೆಗಳ ಪರಿಣಾಮ ಕಡಿಮೆಯಾಗದು ಎಂದು ತಜ್ಞರು ಅಭಯ ನೀಡಿದ್ದಾರೆ. ಒಮಿಕ್ರಾನ್ ಪ್ರಭೇದದಲ್ಲಿ ಕಳವಳಕಾರಿ ರೂಪಾಂತರಿಗಳಿದ್ದು ಅದರಿಂದಾಗಿ ಪ್ರತಿಕಾಯಗಳು ತಪ್ಪಿಸಿಕೊಳ್ಳುವ ಸಂಭವವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ವ್ಯಾಕ್ಸಿನ್ ಹಾಕಿಸಿಕೊಂಡ ಜನರಲ್ಲಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತಿಳಿಯಲು ಇನ್ನೂ ಹೆಚ್ಚು ಸಂಶೋಧನೆಯ ಅಗತ್ಯವಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಒಮಿಕ್ರಾನ್ ಬಗ್ಗೆ ಹೆಚ್ಚು ಗಮನ ಹರಿಸುವುದು ಅಗತ್ಯವಿದೆ. ಆದರೆ ಈ ಪ್ರಭೇದದ ಅಪಾಯದ ಮಟ್ಟವನ್ನು ತಿಳಿಯಲು ಹೆಚ್ಚಿನ ಸಂಶೋಧನೆ ನಡೆಯಬೇಕೆಂದು ಸ್ವತಂತ್ರ ವಿಜ್ಞಾನಿಗಳು ಹೇಳಿದ್ದಾರೆ. ಡೆಲ್ಟಾದಂಥ ಕೆಲವು ಪ್ರಭೇದಗಳು ಮಾತ್ರವೇ ಆರಂಭದಲ್ಲಿ ವ್ಯಕ್ತಪಡಿಸಿದ ಆತಂಕದಂತೆ ಅಪಾಯಕಾರಿಯಾಗಿ ವ್ಯಾಪಕ ಹಾನಿ ಎಸಗಿವೆ. ಬೇರೆ ರೂಪಾಂತರಿಗಳ ಪರಿಣಾಮ ತುಂಬಾ ಸೀಮಿತವಾಗಿತ್ತು ಎಂಬುದು ಅವರ ವಾದವಾಗಿದೆ.

ಕಡ್ಡಾಯ ಕ್ವಾರಂಟೈನ್: ದಕ್ಷಿಣ ಆಫ್ರಿಕಾದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗುತ್ತದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಶನಿವಾರ ಪ್ರಕಟಿಸಿದ್ದಾರೆ. ಒಂದು ವೇಳೆ ಯಾವುದೇ ಪ್ರಯಾಣಿಕರು ಪಾಸಿಟಿವ್ ಆದಲ್ಲಿ ಅವರ ಜಿನೋಮ್ ಸೀಕ್ವೆನ್ಸಿಂಗ್ ಕೂಡ ನಡೆಸಲಾಗುತ್ತದೆ. ಒಮಿಕ್ರಾನ್ ಬಗ್ಗೆ ಮುಂಬೈಯಲ್ಲಿ ಕಳವಳ ಮೂಡಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಹೊರ ಹೋಗುವ ವಿಮಾನಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದಿದ್ದಾರೆ.

ಭಾರತದಲ್ಲಿ ಸೋಂಕು ಇಳಿಕೆ: ಭಾರತದಲ್ಲಿ ಶನಿವಾರ ಕರೊನಾ ಸೋಂಕಿನ 8,318 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಶುಕ್ರವಾರ ವರದಿಯಾಗಿದ್ದಕ್ಕಿಂತ ಶೇಕಡ 21ರಷ್ಟು ಕಡಿಮೆಯಾಗಿದೆ. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,45,63,749ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದೊಂದು ದಿನದಲ್ಲಿ 465 ಜನರು ಸೋಂಕಿಗೆ ಬಲಿಯಾಗಿದ್ದು ಮೃತರ ಒಟ್ಟು ಸಂಖ್ಯೆ 4,67,933ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 1,07,019ಕ್ಕೆ ಇಳಿದಿದೆ.

2ನೇ ಡೋಸ್​ಗೆ ಆದ್ಯತೆ ನೀಡಲು ಮೋದಿ ಸೂಚನೆ: ಒಮಿಕ್ರಾನ್ ಎಂಬ ಹೊಸ ಕರೊನಾ ವೈರಸ್ ಪ್ರಭೇದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಎರಡನೇ ಡೋಸ್ ಲಸಿಕೆ ನೀಡಿಕೆಯ ವೇಗವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರಿಯಾದ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆಯೂ ನಿರ್ದೇಶಿಸಿದರು. ಸೋಂಕಿನ ಪ್ರಕರಣಗಳು ಅಧಿಕವಾಗಿರುವ ಪ್ರದೇಶ ಗಳಲ್ಲಿ ಸಮಗ್ರ ಕಂಟೇನ್​ವೆುಂಟ್ ಹಾಗೂ ಸಕ್ರಿಯ ನಿಗಾ ವ್ಯವಸ್ಥೆಯನ್ನು ಮುಂದುವರಿಸಬೇಕು. ವೆಂಟಿಲೇಷನ್ ಮತ್ತು ಗಾಳಿಯಿಂದ ವೈರಸ್ ಹರಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದೂ ಪ್ರತಿಪಾದಿಸಿದರು. ಹೊಸ ಪ್ರಭೇದ ಕಾಣಿಸಿಕೊಂಡಿರುವುದರಿಂದ, ವಿಮಾನ ಯಾನ ನಿರ್ಬಂಧ ಸಡಿಲಿಕೆ ಮರುಪರಿಶೀಲನೆ ನಡೆಸುವುದು ಸೂಕ್ತ ಎಂದೂ ಪ್ರಧಾನಿ ಸಲಹೆ ಮಾಡಿದರು.

ಮಕ್ಕಳಿಗೆ ಪರೀಕ್ಷೆ ಕಡ್ಡಾಯವಲ್ಲ: ಶಬರಿಮಲೆ ಯಾತ್ರೆಗೆ ತೆರಳುವ ಮಕ್ಕಳಿಗೆ ಆರ್​ಟಿ- ಪಿಸಿಆರ್ ಪರೀಕ್ಷೆ ಕಡ್ಡಾಯವಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ವಯಸ್ಕ ಯಾತ್ರಿಗಳು ಮತ್ತು ಶಬರಿಮಲೆಯಲ್ಲಿ ನಿಯೋಜಿಸಿರುವ ಎಲ್ಲ ಉದ್ಯೋಗಿಗಳು ಎರಡು ಡೋಸ್ ಲಸಿಕೆ ಪಡೆದಿರಬೇಕು ಇಲ್ಲವೇ ಆರ್​ಟಿಪಿಸಿಆರ್ ನೆಗೆಟಿವ್ ವರದಿ ಸಲ್ಲಿಸಬೇಕು.

  • ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಂತೆ ಈಶಾನ್ಯ ಏಷ್ಯಾ ದೇಶಗಳಿಗೆ ಡಬ್ಲ್ಯುಎಚ್​ಒ ಎಚ್ಚರಿಕೆ ನೀಡಿದೆ.
  • ದಕ್ಷಿಣ ಆಫ್ರಿಕಾ, ಬೋಟ್ಸ್ ವಾನಾ, ಜಿಂಬಾಬ್ವೆ, ನಮೀಬಿಯಾ, ಲೆಸೆಥೊ, ಎಸ್ವಾತಿನಿ, ಮೊಜಾಂಬಿಕ್​ಗೆ ವಿಮಾನ ಸಂಚಾರವನ್ನು ನಿಷೇಧಿಸಿ ಅಮೆರಿಕ ಆದೇಶ ಹೊರಡಿಸಿದೆ.

ಗುಜರಾತ್​ನಲ್ಲಿ ಟೆಸ್ಟ್ ಕಡ್ಡಾಯ: ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಗುಜರಾತ್​ನ ವಿಮಾನ ನಿಲ್ದಾಣಗಳಿಗೆ 11 ಕಡೆಗಳಿಂದ ಬರುವ ವಿಮಾನಗಳ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಆರ್​ಟಿ-ಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿದೆ. ಯುರೋಪ್, ಬ್ರಿಟನ್, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೋಟ್ಸ್​ವಾನಾ, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ ಮತ್ತು ಹಾಂಗ್ ಕಾಂಗ್​ಗಳಿಂದ ಬರುವ ವಿಮಾನ ಪ್ರಯಾಣಿಕ ರಿಗೆ ಇದು ಅನ್ವಯವಾಗಲಿದೆ.

ಮಹಾರಾಷ್ಟ್ರ ಕಟ್ಟೆಚ್ಚರ

  • ವಿದೇಶಗಳಿಂದ ಬರುವ ಎಲ್ಲ ವಿಮಾನ ಪ್ರಯಾಣಿಕರು ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಬದ್ಧರಾಗಿರಬೇಕು.
  • ದೇಶೀಯ ವಿಮಾನ ಪ್ರಯಾಣಿಕರು ಎರಡೂ ಡೋಸ್ ಲಸಿಕೆ ಪಡೆದಿರಬೇಕು ಅಥವಾ 72 ಗಂಟೆಯೊಳಗೆ ಪಡೆದ ಆರ್​ಟಿ-ಪಿಸಿಆರ್ ಟೆಸ್ಟ್ ಸರ್ಟಿಫಿಕೆಟ್ ಹೊಂದಿರಬೇಕು.
  • ಕರೊನಾ ನಿಯಮಾವಳಿ ಉಲ್ಲಂಘಿಸುವ ಟ್ಯಾಕ್ಸಿ, ಬಸ್ ಅಥವಾ ಯಾವುದೇ ನಾಲ್ಕು ಚಕ್ರ ವಾಹನಗಳಲ್ಲಿ ಪ್ರಯಾಣಿಕರಿಗೆ 500 ರೂಪಾಯಿ ದಂಡ. ಚಾಲಕ, ನಿರ್ವಾಹಕರಿಗೂ ದಂಡ.
  • ಬಸ್ ಆದಲ್ಲಿ ಅದರ ಮಾಲಿಕರಿಗೆ 1,000 ರೂಪಾಯಿ ದಂಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net