

ನವದೆಹಲಿ: ಎರಡು ವಾರಗಳ ಹಿಂದೆ ಬರೀ ಎರಡು ದೇಶಗಳಲ್ಲಷ್ಟೇ ಕಾಣಿಸಿಕೊಂಡಿದ್ದ ಒಮಿಕ್ರಾನ್ ರೂಪಾಂತರಿ ವೈರಸ್ ಇದೀಗ ಜಗತ್ತಿನ 59 ರಾಷ್ಟ್ರಗಳಲ್ಲಿ ಪತ್ತೆಯಾಗಿದ್ದು, ಆತಂಕವನ್ನು ಹೆಚ್ಚಾಗಿಸಿದೆ. ದೇಶದಲ್ಲಿನ ಒಮಿಕ್ರಾನ್ ಸ್ಥಿತಿಗತಿ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಈ ವಿಷಯ ತಿಳಿಸಿದರು.
ಜಗತ್ತಿನ 59 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್, ಇದುವರೆಗೆ ಒಟ್ಟು 2,936 ಜನರಲ್ಲಿ ದೃಢಪಟ್ಟಿದೆ. ಮತ್ತೊಂದೆಡೆ 78,054 ಮಂದಿಯ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಅವರ ಜೀನೋಮ್ ಸೀಕ್ವೆನ್ಸಿಂಗ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಇದುವರೆಗೆ ಒಟ್ಟು 25 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಆದರೆ ಒಮಿಕ್ರಾನ್ ಸೋಂಕಿತ ಯಾರಲ್ಲೂ ಗಂಭೀರ ರೋಗಲಕ್ಷಣಗಳು ಕಾಣಿಸಿಲ್ಲ. ಒಮಿಕ್ರಾನ್ ಸೋಂಕಿತ ಎಲ್ಲರಲ್ಲೂ ಸೌಮ್ಯವಾದ ರೋಗಲಕ್ಷಣಗಳಿವೆ. ಇನ್ನು ದೇಶದಲ್ಲಿನ ಒಟ್ಟಾರೆ ಕೋವಿಡ್ ಪ್ರಕರಣಗಳ ಪೈಕಿ ಒಮಿಕ್ರಾನ್ ಪ್ರಮಾಣ ಶೇ. 0.04 ಮಾತ್ರ ಎಂಬುದನ್ನು ಅವರು ತಿಳಿಸಿದ್ದಾರೆ.