

ನವದೆಹಲಿ: ಹೊಸ ವರ್ಷವನ್ನು ವಿದೇಶದಲ್ಲಿ ಸಂಭ್ರಮಿಸಬೇಕು ಎಂದು ಯಾರಾದರೂ ಅಂದುಕೊಂಡಿದ್ದರೆ ಅಥವಾ ಹೊಸ ವರ್ಷಾಚರಣೆಗಾದರೂ ಸ್ವದೇಶಕ್ಕೆ ಮರಳಬೇಕು ಅಂತ ಅಂದುಕೊಂಡಿದ್ದರೆ ಅಂಥವರಿಗೆ ಇದು ಅತ್ಯಂತ ಬೇಸರದ ಸಂಗತಿ. ಏಕೆಂದರೆ ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಇದೀಗ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಪ್ರಯಾಣಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಮತ್ತಷ್ಟು ದಿನಗಳವರೆಗೆ ವಿಸ್ತರಿಸಲಾಗಿದೆ.
ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ಒಮಿಕ್ರಾನ್ ಪ್ರಕರಣ ಕೆಲವು ದೇಶಗಳಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡಿಜಿಸಿಎ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಪ್ರಯಾಣಕ್ಕೆ ವಿಧಿಸಲಾದ ನಿರ್ಬಂಧವನ್ನು ವಿಸ್ತರಿಸಿದೆ.
ಈ ಹಿಂದಿನ ಆದೇಶದ ಪ್ರಕಾರ ಡಿ. 15ರ ವರೆಗೆ ನಿರ್ಬಂಧವಿದ್ದು, ಆ ಬಳಿಕ ಅದು ಮರು ಆರಂಭವಾಗುವುದಿತ್ತು. ಆದರೆ ಇದೀಗ ನಿರ್ಬಂಧವನ್ನು 2022ರ ಜ. 31ರ ವರೆಗೂ ವಿಸ್ತರಿಸಲಾಗಿದೆ. ಆದರೆ ಈ ನಿರ್ಬಂಧ ಕಾರ್ಗೋ ಆಪರೇಷನ್ಗೆ ಅನ್ವಯಿಸುವುದಿಲ್ಲ. ಅಲ್ಲದೆ ಕೆಲವೊಂದು ಮಾರ್ಗಗಳಲ್ಲಿ ಸಂದರ್ಭಾನುಸಾರ ಅನುಮತಿ ನೀಡುವ ಸಾಧ್ಯತೆ ಇರುತ್ತದೆ ಎಂದೂ ಈ ಆದೇಶದಲ್ಲಿ ತಿಳಿಸಲಾಗಿದೆ.