ಭಾರತದಲ್ಲಿ 200ಕ್ಕೇರಿದ ಒಮಿಕ್ರಾನ್; ವಿದೇಶದಲ್ಲೂ ಹೊಸ ಪ್ರಭೇದ ಹೆಚ್ಚಳ

omicron
ಸಾಂದರ್ಭಿಕ ಚಿತ್ರ
Published on

ನವದೆಹಲಿ: ದೇಶದಲ್ಲಿ ಆತಂಕದ ಅಲೆ ಎಬ್ಬಿಸಿರುವ ಕರೊನಾ ವೈರಸ್​ನ ಹೊಸ ತಳಿ ಒಮಿಕ್ರಾನ್ ಪ್ರಕರಣ ಮಂಗಳವಾರ 200ಕ್ಕೆ ಮುಟ್ಟಿದೆ. ಮಹಾರಾಷ್ಟ್ರ (65), ದೆಹಲಿ (54) ಅತಿ ಹೆಚ್ಚು ಒಮಿಕ್ರಾನ್ ಸೋಂಕಿತರಿರುವ ರಾಜ್ಯಗಳಾಗಿವೆ. 200 ಕೇಸ್​ಗಳ ಪೈಕಿ 77 ರೋಗಿಗಳು ಗುಣಮುಖರಾಗಿದ್ದಾರೆ. ಹೀಗಾಗಿ, ಹೊಸ ಪ್ರಭೇದದ 123 ಸಕ್ರಿಯ ಕೇಸ್ ದೇಶದಲ್ಲಿವೆ. ತೆಲಂಗಾಣ (20), ಕರ್ನಾಟಕ (19), ರಾಜಸ್ಥಾನ (18), ಕೇರಳ (15) ಮತ್ತು ಗುಜರಾತ್ (14), ಉತ್ತರ ಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಎರಡು, ಆಂಧ್ರ ಪ್ರದೇಶ, ಚಂಡೀಗಢ, ತಮಿಳುನಾಡು ಮತ್ತು ಬಂಗಾಳದಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಮರು ಲಾಕ್ ಡೌನ್​ಗಳತ್ತ ದೇಶಗಳು: ಯುರೋಪ್, ಅಮೆರಿಕದಲ್ಲಿ ಒಟ್ಟಾರೆಯಾಗಿ ಕರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಬ್ರಿಟನ್​ನಲ್ಲಿ ಭಾನುವಾರ ಒಂದೇ ದಿನ 91,473 ಪ್ರಕರಣಗಳು ದಾಖಲಾಗಿ ಆತಂಕ ಸೃಷ್ಟಿಸಿದೆ. ಹಲವು ದೇಶಗಳು ಮತ್ತೆ ಲಾಕ್​ಡೌನ್ ಹೇರಲು ಚಿಂತನೆ ನಡೆಸಿವೆ. ಇನ್ನು ಕೆಲ ರಾಷ್ಟ್ರಗಳು ಈಗಾಗಲೇ ಜಾರಿಯಲ್ಲಿರುವ ಹಲವು ನಿರ್ಬಂಧಗಳನ್ನು ಸಡಿಲಿಸುವುದನ್ನು ವಿಳಂಬಗೊಳಿಸುತ್ತಿವೆ. ಒಮಿಕ್ರಾನ್ ಹಾವಳಿ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ, ತನ್ನ ಅಂತಾರಾಷ್ಟ್ರೀಯ ಗಡಿಯನ್ನು ಮುಕ್ತಗೊಳಿಸುವ ಯೋಜನೆಯನ್ನು ನ್ಯೂಜಿಲೆಂಡ್ ಮುಂದೂಡಿದೆ. ಹಲವು ದೇಶಗಳು ದೈಹಿಕ ಅಂತರ ನಿಯಮವನ್ನು ಮತ್ತೆ ಜಾರಿಗೆ ತಂದಿವೆ.

ಕ್ರಿಸ್​ವುಸ್ ಮತ್ತು ಹೊಸ ವರ್ಷಾಚರಣೆ ಸಮೀಪಿಸುತ್ತಿರುವುದರಿಂದ ಅನೇಕ ದೇಶಗಳು ಹೈ ಅಲರ್ಟ್ ಮೂಡ್​ನಲ್ಲಿವೆ. ಕೋವಿಡ್ ಚಿಕಿತ್ಸೆಯ ಹೊಸ ಔಷಧಿ ರೊನಾಪ್ರೇವ್​ಗೆ ನ್ಯೂಜಿಲೆಂಡ್​ನ ಔಷಧ ನಿಯಂತ್ರಣ ಸಂಸ್ಥೆ ಮಂಗಳವಾರ ಅನುಮೋದನೆ ನೀಡಿದೆ. ಪ್ರಸ್ತುತ ಬಳಕೆಯಲ್ಲಿರುವ ಕರೊನಾ ಲಸಿಕೆಗಳು ಒಮಿಕ್ರಾನ್ ಪ್ರಭೇದದಿಂದ ರಕ್ಷಣೆ ನೀಡಲಾರವು ಎನ್ನುವುದಕ್ಕೆ ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ಆರೋಗ್ಯ ಸಚಿವ ಮನಸುಖ್ ಮಾಂಡವೀಯ ರಾಜ್ಯ ಸಭೆಗೆ ತಿಳಿಸಿದರು.

ಮಕ್ಕಳಿಗೆ ಈಗಲೇ ಲಸಿಕೆ ಬೇಡ: ಮಕ್ಕಳಿಗೆ ಈಗಲೇ ಕರೊನಾ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ಭಾರತ ರಾಷ್ಟ್ರೀಯ ಲಸಿಕೆ ಕುರಿತ ತಾಂತ್ರಿಕ ಸಲಹಾ ಗುಂಪಿನ ಸದಸ್ಯ (ಎನ್​ಟಿಎಜಿಐ) ಜಯಪ್ರಕಾಶ್ ಮುಲಿಯಿಲ್ ಹೇಳಿದ್ದಾರೆ. ಈ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದೆ ಎಂದಿದ್ದಾರೆ. ಮಕ್ಕಳಿಗೆ ವ್ಯಾಕ್ಸಿನ್ ನೀಡುವುದು ಅಷ್ಟೊಂದು ತುರ್ತು ಅಗತ್ಯವಲ್ಲ ಎನ್ನುವುದು ಲಭ್ಯ ದತ್ತಾಂಶಗಳಿಂದ ಗೊತ್ತಾಗಿದೆ. 12 ವರ್ಷಕ್ಕಿಂತ ಕೆಳಗಿನ ಒಂದು ಮಗು ಕೂಡ ಕರೊನಾದಿಂದ ಇದುವರೆಗೆ ಮೃತಪಟ್ಟಿಲ್ಲ ಎಂದವರು ಹೇಳಿದ್ದಾರೆ.

ವಾರ್ ರೂಂ ಸಕ್ರಿಯಗೊಳಿಸಿ: ಒಮಿಕ್ರಾನ್ ತಳಿ ಡೆಲ್ಟಾಕ್ಕಿಂತ ಕನಿಷ್ಠ 3 ಪಟ್ಟು ಹೆಚ್ಚು ವೇಗವಾಗಿ ಹರಡಲಿದೆ ಎಂದು ಹೇಳಿರುವ ಕೇಂದ್ರ ಸರ್ಕಾರ, ಕರೊನಾ ‘ವಾರ್ ರೂಂ’ಗಳನ್ನು ಸಕ್ರಿಯ ಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ. ಜಿಲ್ಲೆ ಮತ್ತು ಸ್ಥಳೀಯ ಮಟ್ಟಗಳಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ.

ನುವಾಕ್ಸೋವಿಡ್​ಗೆ ಡಬ್ಲ್ಯುಎಚ್​ಒ ಒಪ್ಪಿಗೆ: ಅಮೆರಿಕದ ನೊವಾವ್ಯಾಕ್ಸ್ ಅಭಿವೃದ್ಧಿಪಡಿಸಿರುವ ನುವಾಕ್ಸೋವಿಡ್ ಲಸಿಕೆಯನ್ನು ಕರೊನಾ ವಿರುದ್ಧ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಐರೋಪ್ಯ ಒಕ್ಕೂಟದ ಔಷಧ ನಿಯಂತ್ರಣ ಸಂಸ್ಥೆ ಹಸಿರು ನಿಶಾನೆ ತೋರಿದ ನಂತರ ಈ ಕ್ರಮ ಕೈಗೊಂಡಿದೆ. ಇದು ಡಬ್ಲುಎಚ್​ಒ ಅನುಮೋದಿಸಿ ರುವ 10ನೇ ಲಸಿಕೆ.

ಅರ್ಜಿದಾರರಿಗೆ ಲಕ್ಷ ರೂ. ದಂಡ: ಕೋವಿಡ್ ವ್ಯಾಕ್ಸಿನ್ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ತೆಗೆದು ಹಾಕುವಂತೆ ಕೋರಿದ್ದ ಅರ್ಜಿದಾರರಿಗೆ ಕೇರಳ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದೊಂದು ಕ್ಷುಲ್ಲಕ, ರಾಜಕೀಯ ಪ್ರೇರಿತ ಹಾಗೂ ‘ಪ್ರಚಾರ ಆಸಕ್ತಿಯ ಅರ್ಜಿ’ ಎಂದು ಅರ್ಜಿಯನ್ನು ತಳ್ಳಿ ಹಾಕಿದೆ. ಪ್ರಧಾನಿಯನ್ನು ಕಾಂಗ್ರೆಸ್ ಪ್ರಧಾನಿ ಅಥವಾ ಬಿಜೆಪಿ ಪ್ರಧಾನಿ ಅಥವಾ ಬೇರೆ ಯಾವುದೇ ರಾಜಕೀಯ ಪಕ್ಷದ ಪ್ರಧಾನಿ ಎಂದು ಯಾರೂ ಹೇಳಲಾಗದು. ಸಂವಿಧಾನದ ಪ್ರಕಾರ ಆಯ್ಕೆಯಾದ ಅವರು ದೇಶದ ಪ್ರಧಾನಿಯಾಗುತ್ತಾರೆ ಎಂದು ಜಸ್ಟಿಸ್ ಕುನ್ಹಿಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net