ಬಾಹ್ಯಾಕಾಶದಲ್ಲಿ ಒಲಿಂಪಿಕ್ಸ್​​; ನಾಸಾ ಹಂಚಿಕೊಂಡಿರುವ ವೀಡಿಯೊದಲ್ಲಿದೆ ಗಗನಯಾತ್ರಿಗಳ ಆಟ

Untitled-design-2024-07-28T170224.072-1
Published on

ವಾಷಿಂಗ್ಟನ್​ಡಿಸಿ: ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ಆರು ನಾಸಾ ಗಗನಯಾತ್ರಿಗಳು ಪ್ರಸ್ತುತ ಬಾಹ್ಯಾಕಾಶದಲ್ಲಿದ್ದಾರೆ ಎಂಬುದು ಗೊತ್ತೆ ಇದೆ. ಜುಲೈ 26ರಿಂದ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ 2024ರ ಒಲಿಂಪಿಕ್ ಕ್ರೀಡಾಕೂಟವು ಪ್ರಾರಂಭವಾಗಿರುವುದು ತಿಳಿದಿದೆ. ಆದರೆ ಈ ಜಾಗತಿಕ ಸಂಭ್ರಮಕ್ಕೆ ನಾಸಾ ಗಗನಯಾತ್ರಿಗಳು ಸಹ ತಮ್ಮದೇ ಆದ ಬೇಸಿಗೆ ಒಲಿಂಪಿಕ್ಸ್​​​​ನೊಂದಿಗೆ ಸೇರಿಕೊಂಡರು.

ಪ್ಯಾರಿಸ್ ಒಲಿಂಪಿಕ್ಸ್ ಆರಂಭವನ್ನು ಆಚರಿಸಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಗಗನಯಾತ್ರಿಗಳು ತಮ್ಮದೇ ಆದ ಅಣಕು ಬೇಸಿಗೆ ಆಟಗಳನ್ನು ಆಡಿದ್ದಾರೆ. ನಾಸಾ ಬಿಡುಗಡೆ ಮಾಡಿರುವ ಹೊಸ ವೀಡಿಯೊದಲ್ಲಿ ಸುನೀತಾ ವಿಲಿಯಮ್ಸ್ ಸೇರಿದಂತೆ ಗಗನಯಾತ್ರಿಗಳು ಅಥ್ಲೀಟ್‌ಗಳಂತೆ ನಟಿಸಿದ್ದಾರೆ. ಎರಡು ನಿಮಿಷಗಳ ವೀಡಿಯೊವನ್ನು ನಾಸಾ ಹಂಚಿಕೊಂಡಿದೆ.

ವಿನೋದದಿಂದ ತುಂಬಿದ ಚಟುವಟಿಕೆಗಳು ಸುನೀತಾ ವಿಲಿಯಮ್ಸ್ ಸೇರಿದಂತೆ ಇತರೆ ಗಗನಯಾತ್ರಿಗಳು ಅಣಕು ಒಲಿಂಪಿಕ್ ಜ್ಯೋತಿಯನ್ನು ರವಾನಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಅವರ ಕ್ರೀಡಾ ಕೌಶಲಗಳ ತರಬೇತಿ ಪ್ರದರ್ಶನ. ಗಗನಯಾತ್ರಿಗಳು ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಓಟ, ಪಲ್ಟಿ, ಮತ್ತು ಹಾಸ್ಯಮಯವಾಗಿ ತೇಲುವ ನೀರನ್ನು ಕುಡಿಯುವುದು ಸೇರಿದಂತೆ ವಿಶಿಷ್ಟವಾದ ಮೈಕ್ರೋಗ್ರಾವಿಟಿ ಘಟನೆಗಳನ್ನು ವೀಡಿಯೊದಲ್ಲಿ ಹೈಲೈಟ್​ ಮಾಡಿದ್ದಾರೆ.

ಆಟಗಳು ಪ್ರಾರಂಭವಾಗಲಿ! 2024ರ #ಒಲಿಂಪಿಕ್ಸ್ ಅನ್ನು ಪ್ರಾರಂಭಿಸಲು ಪ್ರಪಂಚದಾದ್ಯಂತದ ಕ್ರೀಡಾಪಟುಗಳು ಒಟ್ಟುಗೂಡುತ್ತಿದ್ದಾರೆ. ನೀವು ಒಲಿಂಪಿಕ್ ಅಥ್ಲೀಟ್ ಆಗಿದ್ದರೆ, ನೀವು ಯಾವ ಕ್ರೀಡೆಯನ್ನು ಆಡುತ್ತೀರಿ? ಎಂಬ ಶಿರ್ಷಿಕೆಯಡಿ ವೀಡಿಯೊವನ್ನು ನಾಸಾ ಹಂಚಿಕೊಂಡಿದೆ.

ವೀಡಿಯೊದ ಅಂತ್ಯದಲ್ಲಿ ಆರು ಗಗನಯಾತ್ರಿಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net