

ನವದೆಹಲಿ: ವಿದೇಶಿ ಪ್ರಯಾಣಕ್ಕೆ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದನ್ನು ಕಡ್ಡಾಯಗೊಳಿಸಿದ ಬಜೆಟ್ ಪ್ರಸ್ತಾವನೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ಉಂಟಾದ ಬಳಿಕ ಪ್ರಸ್ತಾವಿತ ತಿದ್ದುಪಡಿಯು ಭಾರತದ ಎಲ್ಲಾ ನಿವಾಸಿಗಳಿಗೆ ಅಲ್ಲ. ಹಣಕಾಸಿನ ಅಕ್ರಮಗಳ ಆರೋಪ ಅಥವಾ ಗಣನೀಯ ತೆರಿಗೆ ಬಾಕಿ ಹೊಂದಿರುವವರಿಗೆ ಮಾತ್ರ ಅಂತಹ ಕ್ಲಿಯರೆನ್ಸ್ ಅಗತ್ಯವಿದೆ ಎಂದು ಸರ್ಕಾರ ಭಾನುವಾರ(ಜುಲೈ 28) ಸ್ಪಷ್ಟಪಡಿಸಿದೆ.
ವಿದೇಶಕ್ಕೆ ವಲಸೆ ಹೋಗುವ ಭಾರತೀಯರು ಕಪ್ಪುಹಣ ಕಾಯ್ದೆಯಡಿ ದೇಶವನ್ನು ತೊರೆಯುವ ಮೊದಲು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದನ್ನು ಕಡ್ಡಾಯಗೊಳಿಸುವಂತೆ 2024ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ನಿಯಮವನ್ನು ಪರಿಚಯಿಸಿದರು.
ಹಣಕಾಸು ಸಚಿವಾಲಯವು, 2024ರ ಹಣಕಾಸು ಮಸೂದೆಯಲ್ಲಿ ಕಪ್ಪುಹಣ ಕಾಯಿದೆ, 2015ರ ಉಲ್ಲೇಖವನ್ನು ಕಾಯ್ದೆಗಳ ಪಟ್ಟಿಗೆ ಸೇರಿಸಲು ಪ್ರಸ್ತಾಪಿಸಿದೆ. ಅದರ ಅಡಿಯಲ್ಲಿ ಯಾವುದೇ ವ್ಯಕ್ತಿಯು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಲು ತನ್ನ ಹೊಣೆಗಾರಿಕೆಗಳನ್ನು ತೆರವುಗೊಳಿಸಬೇಕು. ಆದರೆ ಎಲ್ಲಾ ನಿವಾಸಿಗಳು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 230ರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೂ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅಗತ್ಯವಿಲ್ಲ. ನಿರ್ದಿಷ್ಟ ಜನರು ಮಾತ್ರ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ. 2004ರ ಅಧಿಸೂಚನೆಯ ಮೂಲಕ, ಆದಾಯ ತೆರಿಗೆ ಇಲಾಖೆಯು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅನ್ನು ಭಾರತದಲ್ಲಿ ನೆಲೆಸಿರುವ ವ್ಯಕ್ತಿಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಪಡೆಯಬೇಕಾಗಬಹುದು ಎಂದು ನಿರ್ದಿಷ್ಟಪಡಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
2004ರ ನಿಯಮಗಳನ್ನು ಉಲ್ಲೇಖಿಸಿ ಸಚಿವಾಲಯವು ಗಂಭೀರ ಆರ್ಥಿಕ ಅಕ್ರಮಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಅಥವಾ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ನೇರ ತೆರಿಗೆ ಬಾಕಿ ಇರುವವರಿಗೆ ಮಾತ್ರ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅಗತ್ಯವಿದೆ ಎಂದು ಹೇಳಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬರಲಿರುವ ಈ ನಿಯಮವನ್ನು ಬಹಿರಂಗಪಡಿಸದ ವಿದೇಶಿ ಆಸ್ತಿಗಳಿಗೆ ಸಂಬಂಧಿಸಿದ ತೆರಿಗೆ ವಂಚನೆಯನ್ನು ಎದುರಿಸುವ ಉದ್ದೇಶದಿಂದ ಪರಿಚಯಿಸಲಾಗಿದೆ.
ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರು ಅಥವಾ ಆದಾಯ ತೆರಿಗೆಯ ಮುಖ್ಯ ಆಯುಕ್ತರಿಂದ ಅನುಮೋದನೆಯನ್ನು ಪಡೆದ ನಂತರ ಮತ್ತು ಅದಕ್ಕೆ ಕಾರಣಗಳನ್ನು ದಾಖಲಿಸಿದ ನಂತರ ಮಾತ್ರ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಲು ವ್ಯಕ್ತಿಯನ್ನು ಕೇಳಬಹುದು ಎಂದು ಐಟಿ ಇಲಾಖೆ ಹೇಳಿದೆ. (ಏಜೆನ್ಸೀಸ್)