

ಬೀರೂರು: ಎಲ್ಲಿ ಕಣ್ಣು ಹಾಯಿಸಿದರೂ ಶ್ರೀರಾಮನ ಚಿತ್ರಗಳು, ಯಾರ ಬಾಯಲ್ಲಿ ಕೇಳಿದರೂ ರಾಮನದ್ದೇ ಜಪ, ಸೋಮವಾರ ಮತ್ತೆ ಪ್ರತಿಷ್ಠಾಪನೆಯಾದ ಶ್ರೀರಾಮನಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಶ್ರೀರಾಂಪುರನಲ್ಲಿರುವ ಶ್ರೀ ಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಾಲಯದಲ್ಲಿ ಬೆಳಗ್ಗೆ ಪರಿವಾರ ಸಹಿತ ಪಟ್ಟಾಭಿರಾಮರಿಗೆ ಅಭ್ಯಂಗ ಸ್ನಾನ, ಪಂಚಾಮೃತ, ಪುರುಷಸೂಕ್ತ ಪೂರ್ವಕ ಅಭಿಷೇಕ, ಪ್ರತಿಷ್ಠಾಪನಾ ಮುಹೂರ್ತದಲ್ಲಿ ಮಹಾಮಂಗಳಾರತಿ, ಭಜನೆ ನಡೆಯಿತು. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಅನುವಾಗುವಂತೆ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ದೇವಾಲಯಕ್ಕೆ ಬಂದ ಭಕ್ತರು ನೇರ ಪ್ರಸಾರವನ್ನು ಕಣ್ತುಂಬಿಕೊಂಡರು.
ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದೇವಾಲಯಗಳಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಪಟ್ಟಣದ ರಂಗಸ್ವಾಮಿ, ಮಹಾತ್ಮ ಗಾಂಧಿ ವೃತ್ತದ ಸುದರ್ಶನ್ ಹೋಟೆಲ್‌ಗಳಲ್ಲಿ, ಲಿಂಗದಹಳ್ಳಿ ರಸ್ತೆಯ ಭಗಿರಥ ವೃತ್ತ, ಡಿ.ವಿ.ಹಾಲಪ್ಪ ರಸ್ತೆ, ಎಂ.ಜಿ.ಸರ್ಕಲ್, ಮಹಾನವಮಿ ಬಯಲಿನಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಕರಗಲ್ ಬೀದಿಯ ಶ್ರೀ ಬೇಟೆರಂಗನಾಥಸ್ವಾಮಿ, ಉಪ್ಪಾರ ಕ್ಯಾಂಪ್‌ನ ರಾಮ ಮಂದಿರ, ಗಣಪತಿ ಪೆಂಡಾಲ್ ಮುಂಭಾಗದ ವೀರಾಂಜನೇಯ, ಮಹಾನವಮಿ ಬಯಲಿನ ಶಿವಾಜಿ ಪುತ್ಥಳಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಶ್ರೀ ವೀರಭದ್ರಸ್ವಾಮಿ ಯುವಕ ಸಂಘ, ಕನ್ನಡಸಂಘ, ರಂಭಾಪುರಿ ಶಾಖಾ ಮಠ, ಸವಿತಾ ಸಮಾಜ ಸೇರಿ ಬಹಳಷ್ಟು ದೇವಾಲಯ, ಸಂಘ ಸಂಸ್ಥೆಗಳು ಶ್ರೀರಾಮನ ಬ್ಯಾನರ್, ಕಟೌಟ್ ಮತ್ತು ಭಾವಚಿತ್ರಗಳನ್ನು ಅಳವಡಿಸಿದ್ದವು.
ಪಾಂಡುರಂಗ ರುಕ್ಮಾಯಿ, ಹಳೇಪೇಟೆ ವೀರಾಂಜನೇಯ ಸ್ವಾಮಿ, ರೈಲ್ವೇ ಸ್ಟೇಷನ್ ರಸ್ತೆಯ ಮಾರುತಿ ಮಂದಿರ ಮೊದಲಾದ ಕಡೆಗಳಲ್ಲಿ ಸೋಮವಾರ ರಾಮತಾರಕ ಹೋಮ ಸೇರಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಹುತೇಕ ದೇವಾಲಯಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.
ಮಹಾತ್ಮ ಗಾಂಧಿ ವೃತ್ತದಲ್ಲಿರುವ ಹೈಮಾಸ್ಟ್ ದೀಪದ ಕಂಬಕ್ಕೆ ಕೇಸರಿ ಬಾವುಟ, ಬಂಟಿಂಗ್ಸ್‌ಗಳನ್ನು ಕಟ್ಟಲಾಗಿತ್ತು. ಯುವಕರು ಬೈಕ್ ಹಾಗೂ ವಾಹನಗಳಲ್ಲಿ ಕೇಸರಿ ಧ್ವಜಗಳನ್ನು ಅಳವಡಿಸಿಕೊಂಡು ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತ ಸಂಚರಿಸಿದರು. ಯುವಕರು ರಾಜಬೀದಿ ಮೆರವಣಿಗೆಗೆ ಪೊಲೀಸ್ ಇಲಾಖೆ ಅನುಮತಿ ನೀಡಲಿಲ್ಲ. ಮಾರ್ಗದ ಕ್ಯಾಂಪ್ ಶ್ರೀರಾಮನ ರಾಜಬೀದಿ ಉತ್ಸವಕ್ಕೆ ಕರೆಸಿದ್ದ ವಾದ್ಯಗೋಷ್ಠಿ, ಡೋಲುಗಳನ್ನು ಬೇಸರದಿಂದ ವಾಪಸ್ ಕಳುಹಿಸಿದರು.