

ನವದೆಹಲಿ: ಒಡಿಶಾದ ಸರ್ಕಾರ ಇದೀಗ ತನ್ನ ರಾಜ್ಯ ಭಾಷೆಯಾದ ‘ಒಡಿಯಾ’ನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಒಡಿಶಾ ಕ್ಯಾಬಿನೆಟ್ ಬುಧವಾರ ಎಲ್ಲಾ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಸಂಕೇತ ಫಲಕಗಳಲ್ಲಿ ಒಡಿಯಾ ಭಾಷೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ. ಇದನ್ನು ಜಾರಿಗೆ ತರಲು, ಒಡಿಶಾ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1956 ಅನ್ನು ಮಾರ್ಚ್ 20ರಿಂದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತಿದ್ದುಪಡಿ ಮಾಡಲು ಮುಂದಾಗಿದೆ.
ಯೋಜನೆಗೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಯ ಪ್ರಕಾರ, ಏಪ್ರಿಲ್ 1 ರಂದು ಅಂದರೆ, ಒಡಿಶಾದ ‘ಉತ್ಕಲ ದಿಬಸ’ದಂದು ಈ ಕ್ರಮವನ್ನು ಜಾರಿಗೆ ತರುವ ಸಾಧ್ಯತೆಗಳಿವೆ. ನಿಯಮವನ್ನು ಜಾರಿಗೆ ತಂದ ನಂತರ, ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳು ಒಂದು ತಿಂಗಳೊಳಗೆ ಈ ಕಾನೂನನ್ನು ಪಾಲಿಸಬೇಕಾಗಿದ್ದು ತಪ್ಪಿದಲ್ಲಿ ಮೊದಲ ಬಾರಿಯ ಉಲ್ಲಂಘನೆಗಾಗಿ 1,000 ರೂ.ನಿಂದ 5,000 ರೂ.ವರೆಗೆ ದಂಡ ಪಾವತಿಸಬೇಕಾಗಿದ್ದು ಎರಡನೇ ಬಾರಿ ಉಲ್ಲಂಘಿಸಿದಲ್ಲಿ, 2,000 ರೂ. ನಿಂದ 25,000 ರೂ.ವರೆಗೆ ದಂಡ ಪಾವತಿ ಮಾಡಬೇಕಾಗುತ್ತದೆ.
ಈ ನಿರ್ಣಯದ ಮೂಲಕ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಡಳಿತಾರೂಢ ಬಿಜು ಜನತಾ ದಳ (BJD) ರಾಜ್ಯದ ಮೇಲೆ ಹಿಡಿತ ಕಳೆದುಕೊಂಡಿದೆ ಎಂಬ ಟೀಕೆಯನ್ನು ಹಿಮ್ಮೆಟ್ಟಿಸಲು ಈ ರೀತಿಯ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ರೋಮನ್ ಲಿಪಿಯಲ್ಲಿ ಓಡಿಯಾವನ್ನು ಓದಿದ್ದಕ್ಕಾಗಿ ಪ್ರತಿಪಕ್ಷಗಳು ವಾಡಿಕೆಯಂತೆ ನವೀನ್ ಪಟ್ನಾಯಕ್‍ರನ್ನು ಗುರಿಯಾಗಿಸಿವೆ. ಕಳೆದ 18 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಒಡಿಯಾ ಭಾಷೆ ಓದಲು ಬಾರದೇ ಇರುವುದರಿಂದ ರಾಜ್ಯದ ಹಲವಾರು ಟಿವಿ ಕಾರ್ಯಕ್ರಮಗಳು ಕಾಲೆಳೆಯುತ್ತವೆ. (ಏಜೆನ್ಸೀಸ್)