More

    ಭವಿಷ್ಯದ ತಂತ್ರಜ್ಞಾನಗಳ ಜತೆ ಕನ್ನಡ ಉಳಿಸಿ, ಬೆಳೆಸಿ: ಟಿ.ಎಸ್.ನಾಗಾಭರಣ

    ಶಿವಮೊಗ್ಗ: ಭವಿಷ್ಯದ ತಂತ್ರಜ್ಞಾನಗಳ ಜತೆ ಜತೆಗೆ ಕನ್ನಡ ಭಾಷೆಯನ್ನೂ ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.
    ನಗರದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಬುಧವಾರ ಕನ್ನಡ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮನಸ್ಸು ಮತ್ತು ಹೃದಯಕ್ಕೆ ಕನ್ನಡ ಹತ್ತಿರವಾದಾಗ ಮಾತ್ರ ಕನ್ನಡ ಭಾಷೆ ಬೆಳೆಯಲಿದೆ. ಇಂದು ಮನಸ್ಸು ಮತ್ತು ಹೃದಯದಲ್ಲಿ ಕನ್ನಡ ಬೇರೆ ಬೇರೆ ಆಗಿರುವುದೇ ಕನ್ನಡ ಭಾಷಾ ಅನುಷ್ಠಾನದಲ್ಲಿ ಕಡೆಗಣನೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಕನ್ನಡದಲ್ಲಿ ಪಠ್ಯ ಇದ್ದರೂ ಇಂಗ್ಲಿಷ್‌ನಲ್ಲಿ ಆಲೋಚನೆ ಮಾಡುತ್ತಿದ್ದೇವೆ. ಪಠ್ಯ ಮತ್ತು ಪಠ್ಯೇತರ ಕ್ರಮಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಬೇಕು. ಅದರಲ್ಲೂ ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಕನ್ನಡ ಜೋಡಿಸುವ ಕೆಲಸ ಆಗಬೇಕಿದೆ. ಕೃಷಿ ಮತ್ತು ತೋಟಗಾರಿಕಾ ವಿವಿ ವಿದ್ಯಾರ್ಥಿಗಳು ಕೊನೆಗೆ ಕೃಷಿ ಮತ್ತು ರೈತರಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಿರುವುದರಿಂದ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
    ಎಷ್ಟು ಸಾಧ್ಯವೋ ಅಷ್ಟು ಕನ್ನಡವನ್ನು ಕಾಣಿಸುವ ಮತ್ತು ಕೇಳಿಸುವ ಕೆಲಸ ಮಾಡಬೇಕಿದೆ. ಅದು ಸಾಧ್ಯವಾದರೆ ಮಾತ್ರ ಮಾತೃ ಭಾಷೆಗೆ ಗೌರವ ನೀಡಿದಂತೆ ಆಗಲಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮತ್ವವನ್ನು ನೀಡಬೇಕಿದೆ. ಆದರೆ ಇಂಗ್ಲಿಷ್ ಬಗೆಗಿನ ವ್ಯಾಮೋಹ ಮತ್ತು ಭ್ರಮೆಯಿಂದ ಕನ್ನಡ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ ಎಂದರು.
    ಸರ್ಕಾರಕ್ಕೂ ವಿವಿಗೂ ಸಂಬಂಧವೇ ಇಲ್ಲವಾ ?
    ಕೃಷಿ ಮತ್ತು ತೋಟಗಾರಿಕಾ ವಿವಿಗೂ ಮತ್ತು ರಾಜ್ಯ ಸರ್ಕಾರಕ್ಕೂ ಸಂಬಂಧವೇ ಇಲ್ಲವಾ ಎಂದು ನಾಗಾಭರಣ ವಿವಿ ಅಧಿಕಾರಿಗಳನ್ನು ಪ್ರಶ್ನಿಸಿದರು. ವಿವಿಯ ವೆಬ್‌ಸೈಟ್‌ನಲ್ಲಿ ಮೊದಲು ಕನ್ನಡ ಬರಬೇಕು. ಆನಂತರ ಇಂಗ್ಲಿಷ್, ಹಿಂದಿ ಆಯ್ಕೆ ಮಾಡಿಕೊಳ್ಳುವಂತಿರಬೇಕು. ವೇತನ, ಸೌಲಭ್ಯಗಳನ್ನು ಪಡೆಯುತ್ತಿದ್ದು ಸರ್ಕಾರದ ಅಧೀನದಲ್ಲೇ ಇದ್ದರೂ ಲೋಗೋ ಅಥವಾ ಇನ್ನಾವುದೇ ವಿವರವನ್ನು ಕಾಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಕುಲ ಸಚಿವ ಡಾ. ಆರ್.ಲೋಕೇಶ್, ಆಡಳಿತಾಧಿಕಾರಿ ಡಾ. ಜಿ.ಕೆ.ಗಿರಿಜೇಶ್, ವಿಸ್ತರಣಾ ನಿರ್ದೇಶಕ ಡಿ.ಬಿ.ಹೇಮ್ಲಾನಾಯಕ್, ಆರ್.ಮಹಮ್ಮದ್ ಆರೀಫ್‌ಖಾನ್, ಪಿ.ಎಸ್.ರಮೇಶ್, ಡಾ. ಎಂ.ಸಿ.ಮಲ್ಲಿಕಾರ್ಜುನ್, ಡಾ. ಶರಣಬಸಪ್ಪ ದೇಶಮುಖ, ಬಿ.ಎಂ.ದುಷ್ಯಂತ್‌ಕುಮಾರ್, ಕೆ.ಸಿ.ಶಶಿಧರ್, ಡಾ. ಎಂ.ದಿನೇಶ್‌ಕುಮಾರ್, ಡಾ.ಶಿವಶಂಕರ್, ಡಾ. ಎಂ.ಹನುಮಂತಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts