More

    ಇಂಡಿ ಮೈತ್ರಿಕೂಟದ ನಾಯಕರಿಗೆ ಡಿಪ್ರೆಷನ್: ಜೆ.ಪಿ.ನಡ್ಡಾ

    ಶಿವಮೊಗ್ಗ: ಗೃಹ ಸಚಿವ ಅಮಿತ್ ಷಾ ಅವರ ಭಾಷಣವನ್ನು ಡೀಪ್‌ಫೇಕ್ ಮಾಡಿ ಅದನ್ನು ಬೇರೆಯವರಿಗೆ ಕಳಿಸುವ ಮೂಲಕ ತೆಲಂಗಾಣ ಸಿಎಂ ತಮ್ಮ ಮನಸ್ಥಿತಿಯನ್ನು ಪ್ರಕಟಿಸಿದ್ದಾರೆ. ಇಂಡಿ ಮೈತ್ರಿಕೂಟದ ನಾಯಕರು ಡಿಪ್ರೆಷನ್‌ಗೆ ಒಳಗಾಗಿದ್ದಾರೆ. ಹೀಗಾಗಿ ಡೀಪ್‌ಫೇಕ್ ಮಾರ್ಗ ಆಯ್ದುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ಪ್ರಕಾಶ್ ನಡ್ಡಾ ಹರಿಹಾಯ್ದರು.

    ನಗರದಲ್ಲಿ ಶನಿವಾರ ಬಿಜೆಪಿ ಏರ್ಪಡಿಸಿದ್ದ ವೃತ್ತಿಪರರ ಸಮಾವೇಶದಲ್ಲಿ ಮಾತನಾಡಿದ ಅವರು, ಡೀಪ್‌ಫೇಕ್ ಪ್ರಕರಣ ಕಾಂಗ್ರೆಸ್‌ನವರ ಮನಸ್ಥಿತಿಗೆ ಎಕ್ಸ್‌ರೇ ಮಾಡಿದಂತಿದೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದೆಂದು ಸಂವಿಧಾನದಲ್ಲಿದ್ದರೂ ಒಬಿಸಿ ಕೋಟಾದಲ್ಲಿದ್ದ ಶೇ.4 ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಭ್ರಷ್ಟಾಚಾರವೇ ಇಂಡಿ ಮೈತ್ರಿಕೂಟದಲ್ಲಿರುವವರ ಅಜೆಂಡಾ. ಅಲ್ಲಿರುವ ಬಹುತೇಕ ನಾಯಕರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಯಾವುದೇ ಬದ್ಧತೆ ಇಲ್ಲ. ಆದರೆ ನಾವು ಸ್ಪಷ್ಟ ಕಲ್ಪನೆಯೊಂದಿಗೆ ಆಡಳಿತ ಮಾಡುತ್ತಿದ್ದೇವೆ. 10 ವರ್ಷಗಳ ಅವಧಿಯಲ್ಲಿ ಭಾರತ ಸಂಪೂರ್ಣ ಬದಲಾಗಿದೆ. ವಿದೇಶಾಂಗ ನೀತಿ ಸುಧಾರಣೆಯಾಗಿದೆ ಎಂದರು.
    ಇಂದು ವಿಶ್ವದ ವೇದಿಕೆಯಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾರೆ. ಸ್ವಾತಂತ್ರಾೃನಂತರ ನಮ್ಮ ನೆರೆ ರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿಗೆ ಪ್ರಯತ್ನ ನಡೆದಿರಲಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ಬಳಿಕ ಮೊದಲು ಭೂತಾನ್‌ಗೆ ಭೇಟಿ ನೀಡಿದರು. ನಂತರ ನೇಪಾಳಕ್ಕೆ ಹೋಗಿಬಂದರು. 70 ವರ್ಷದವರೆಗೆ ನಮ್ಮ ಯಾವ ಪ್ರಧಾನಿಯೂ ನೇಪಾಳಕ್ಕೆ ಭೇಟಿ ನೀಡಿರಲಿಲ್ಲ ಎಂದು ಹೇಳಿದರು.
    10 ವರ್ಷಗಳಲ್ಲಿ ರಾಜಕೀಯ ಸಂಸ್ಕೃತಿ ಬದಲಾಗಿದೆ. ಜಾತಿ, ಧರ್ಮ ಆಧಾರಿಸಿ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ ರಿಪೋರ್ಟ್ ಕಾರ್ಡ್ ಗಮನಿಸಿ ಅವಕಾಶ ನೀಡಲಾಗುತ್ತಿದೆ. ರಾಜಕೀಯದ ವ್ಯಾಖ್ಯೆಯೇ ಬದಲಾಗಿದೆ. ಕರೊನಾ ಬಳಿಕ ವಿಶ್ವದ ಅನೇಕ ರಾಷ್ಟ್ರಗಳ ಆರ್ಥಿಕತೆ ಕುಸಿಯಿತು. ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಇದು ಮತ್ತಷ್ಟು ಚಿಂತಾಜನಕವಾಯಿತು. ಆದರೆ ಭಾರತದ ಆರ್ಥಿಕತೆ ಸದೃಢವಾಗಿದೆ. ಇದು ಮೋದಿ ಆರ್ಥಿಕ ನೀತಿಯ ಯಶಸ್ಸು ಎಂದು ತಿಳಿಸಿದರು.
    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts