ಪೊಲೀಸ್ ಗುಂಡಿಗೆ ಬಲಿಯಾದ ಸಚಿವ; ಚಿಕಿತ್ಸೆ ಫಲಿಸದೆ ಒಡಿಶಾ ಆರೋಗ್ಯ ಸಚಿವ ಸಾವು

Naba
Published on

ನವದೆಹಲಿ: ಪೊಲೀಸ್ ಅಧಿಕಾರಿ ಹಾರಿಸಿದ್ದ ಗುಂಡಿನಿಂದ ಗಾಯಗೊಂಡಿದ್ದ ಒಡಿಶಾ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್​ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರದ ಬಳಿಯ ಗಾಂಧಿ ಚೌಕ್ ಬಳಿ ಇಂದು ಸಹಾಯಕ ಸಬ್​ ಇನ್​ಸ್ಪೆಕ್ಟರ್ ಸಚಿವರ ಮೇಲೆ ಗುಂಡು ಹಾರಿಸಿದ್ದರು.

ಸಚಿವರು ಬೆಳಗ್ಗೆ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಎಎಸ್​ಐ ಗೋಪಾಲ್ ದಾಸ್ ಎಂಬಾತ ಗುಂಡು ಹಾರಿಸಿದ್ದ. ಪರಿಣಾಮವಾಗಿ ಆರೋಗ್ಯ ಸಚಿವರ ಎದೆಗೇ ಗುಂಡು ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ವಿಭಾಗದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಒಂದು ಬುಲೆಟ್​ ದೇಹಕ್ಕೆ ಹೊಕ್ಕು ಹೊರಹೋಗಿದ್ದು, ಹೃದಯ ಹಾಗೂ ಶ್ವಾಸಕೋಶಕ್ಕೆ ಗಾಯಗೊಳಿಸಿತ್ತು. ಶಸ್ತ್ರಚಿಕಿತ್ಸೆ ಮಾಡಿ ಚಿಕಿತ್ಸೆ ನೀಡಲಾಯಿತಾದರೂ ಅವರು ಕೊನೆಯುಸಿರೆಳೆದಿದ್ದಾರೆ. ಸಚಿವರ ಸಾವಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ಸೂಚಿಸಿದ್ದಾರೆ.

ಘಟನೆ ತಕ್ಷಣ ಎಎಸ್​ಐಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶೂಟ್ ಮಾಡಲು ಕಾರಣ ಏನು ಎಂಬುದು ಇನ್ನೂ ಖಚಿತವಾಗಿಲ್ಲ. ತನ್ನ ಪತಿಗೆ ಮಾನಸಿಕ ಸಮಸ್ಯೆ ಇದ್ದು ಕೆಲವು ವರ್ಷಗಳಿಂದ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಎಸ್​ಐ ಪತ್ನಿ ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net