

ನವದೆಹಲಿ: ದೇಶದಲ್ಲಿ ಕರೊನಾವೈರಸ್ ಹರಡುತ್ತಿರುವುದರಿಂದ ನೀಟ್ ಮತ್ತು ಜೆಇಇ ಮುಖ್ಯ ಪ್ರವೇಶ ಪರೀಕ್ಷೆಗಳನ್ನು ಮುಂದೂಡಬೇಕೆಂದು ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮನವಿ ಮಾಡಿದ್ದಾರೆ.
ಒಡಿಶಾದ 50,000 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಮತ್ತು ಜೆಇಇ ಮೇನ್ ಪರೀಕ್ಷೆಗೆ 40,000 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ಅವರು ಹೇಳಿದರು.
ಜೆಇಇ ಮುಖ್ಯ ಪರೀಕ್ಷೆ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರವರೆಗೆ ನಡೆಯಲಿದ್ದು, ನೀಟ್ ಪರೀಕ್ಷೆ ಸೆಪ್ಟೆಂಬರ್ 13 ರಂದು ನಡೆಯಲಿದೆ..
ಎನ್‌ಟಿಎ ರಾಜ್ಯದ ನಗರಗಳಲ್ಲಿ 7 ಪರೀಕ್ಷಾ ಕೇಂದ್ರಗಳನ್ನು ಹಂಚಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಮತ್ತು ಅಲ್ಲಿಗೆ ತಲುಪಲು ಕಷ್ಟವಾಗುತ್ತದೆ. "ಈ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹಾಜರಾಗುವುದು ಅಸುರಕ್ಷಿತ ಮತ್ತು ಅಪಾಯಕಾರಿ ಎಂದು ಪಟ್ನಾಯಕ್ ತಿಳಿಸಿದ್ದಾರೆ.
ಒಡಿಶಾದಲ್ಲಿ ಹೆಚ್ಚಾಗಿ ಬುಡಕಟ್ಟು ಸಮುದಾಯಗಳಿದ್ದು ಮತ್ತು ನಗರ ಕೇಂದ್ರಗಳಿಂದ ದೂರದ ಪ್ರದೇಶಗಳಲ್ಲಿವೆ. ಅಂತಹ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿರಬಹುದು. ಕೋವಿಡ್ 19ನ ಈ ವಿಷಮ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಬಹಳ ದೂರ ಪ್ರಯಾಣಿಸಬೇಕಾಗಿರುವುದು ಅಪಾಯಕಾರಿ ಎಂದಿದ್ದಾರೆ.
ಇದನ್ನೂ ಓದಿ: ಎನ್ಎಟಿಎ 2020: ಪ್ರವೇಶ ಪತ್ರ ಬಿಡುಗಡೆ
ಜೆಇಇ ಮುಖ್ಯ ಮತ್ತು ನೀಟ್ ಪರೀಕ್ಷೆಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಿದರೆ ವಿದ್ಯಾರ್ಥಿಗಳ ಸುರಕ್ಷತೆಗೆ ಯಾವುದೇ ಅಪಾಯವಿಲ್ಲವಾದ್ದರಿಂದ ಪರೀಕ್ಷೆ ಮುಂದೂಡಿಕೆಗೆ ಸಿಎಂ ಶಿಕ್ಷಣ ಸಚಿವ ಪೋಖ್ರಿಯಾಲ್ ಅವರಿಗೆ ವಿನಂತಿಸಿದ್ದಾರೆ.
ಇದಲ್ಲದೆ, ಒಡಿಶಾದ ವಿದ್ಯಾರ್ಥಿಗಳಿಗೆ ಎರಡ್ಮೂರು ಗಂಟೆಗಳಲ್ಲಿ ಪರೀಕ್ಷಾ ಕೇಂದ್ರ ತಲುಪಲು ಮತ್ತು ಅದೇ ದಿನ ಮನೆಗೆ ಹೋಗಲು ಸಹಾಯವಾಗುವಂತೆ, ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ರಾಜ್ಯದ 30 ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ರಚಿಸಬೇಕೆಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ನಿರ್ದೇಶನ ನೀಡಬೇಕೆಂದು ಡಾ. ಪೋಖ್ರಿಯಾಲ್ ಅವರಿಗೆ ಮನವಿ ಮಾಡಿದ್ದಾರೆ.